ಸೋಮವಾರಪೇಟೆ, ಜೂ. ೮: ಕೊಡ್ಲಿಪೇಟೆಯ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಡ್ಲಿಪೇಟೆ ಗ್ರಾ.ಪಂ.ನ ವಾಟರ್ಮೆನ್, ನವಗ್ರಾಮ ನಿವಾಸಿ ಮಣಿ ಮುತ್ತು(೩೪) ಎಂಬವರ ಮೃತದೇಹ ಇಂದು ಪತ್ತೆಯಾಗಿದೆ.
ನಿನ್ನೆ ದಿನ ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡು ಆಕೆಯ ಕಣ್ಣೆದುರೇ ಹೇಮಾವತಿ ನದಿಗೆ ಹಾರಿದ್ದ ಮಣಿಮುತ್ತು ಅವರ ಮೃತದೇಹ ಇಂದು ಸಂಜೆ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ಸುಮಾರು ೩೦ ಮೀಟರ್ ದೂರದಲ್ಲಿ, ನದಿಯ ಆಳದಲ್ಲಿ ಶೋಧಕಾರ್ಯ ನಡೆಸಿದ ಸಂದರ್ಭ ಮೃತದೇಹ ಪತ್ತೆಯಾಗಿದೆ.
ನಿನ್ನೆ ದಿನ ಸೋಮವಾರಪೇಟೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗರಗಂದೂರಿನ ಮುಳುಗು ತಜ್ಞರು ಆಗಮಿಸಿ ಮೃತದೇಹದ ಶೋಧ ಕಾರ್ಯ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಬೆಳಿಗ್ಗೆ ಮಡಿಕೇರಿಯಿಂದ ಆಗಮಿಸಿದ ಎನ್ಡಿಆರ್ಎಫ್ ತಂಡದ ೧೮ ಸಿಬ್ಬಂದಿಗಳು, ೨ ಮೋಟಾರ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು, ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ತಂಡ ನದಿಯಲ್ಲಿ ಸುಮಾರು ೧೦ ಕಿ.ಮೀ. ದೂರದವರೆಗೂ ತೆರಳಿ ಶೋಧ ಕಾರ್ಯ ನಡೆಸಿದರೆ, ಮತ್ತೊಂದು ತಂಡ ಘಟನೆ ನಡೆದ ಸುತ್ತಮುತ್ತಲಲ್ಲಿ ಪತ್ತೆ ಕಾರ್ಯ ಕೈಗೊಂಡಿತ್ತು. ಸಂಜೆಯ ವೇಳೆಗೆ ಘಟನೆ ನಡೆದ ಸ್ಥಳದಿಂದ ೩೦ ಮೀಟರ್ ದೂರದಲ್ಲಿ, ನದಿಯ ಆಳದಲ್ಲಿ ಮೃತದೇಹ ಪತ್ತೆಯಾಯಿತು.
ಎನ್ಡಿಆರ್ಎಫ್ನ ಕಮಾಂಡರ್ ಬಬ್ಲೂ ಬಿಶ್ವಾಸ್ ನೇತೃತ್ವದ ತಂಡ ಶೋಧ ಕಾರ್ಯ ನಡೆಸಿತು. ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಕೊಡ್ಲಿಪೇಟೆ ಕಂದಾಯ ಅಧಿಕಾರಿ ಮನುಕುಮಾರ್, ಉಪ ಪೊಲೀಸ್ ಠಾಣಾ ಎಎಸ್ಐ ಚನ್ನಯ್ಯ, ಮುಖ್ಯಪೇದೆ ಡಿಂಪಲ್, ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಅಭಿವೃದ್ಧಿ ಅಧಿಕಾರಿ ಹರೀಶ್ ಅವರುಗಳು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.
ನದಿಯಿಂದ ಮೃತದೇಹವನ್ನು ಹೊರ ತೆಗೆಯುತ್ತಿದ್ದಂತೆ ಸಂಬAಧಿಕರ ರೋಧನೆ ಮುಗಿಲುಮುಟ್ಟಿತು. ಮೃತದೇಹವನ್ನು ಸೋಮವಾರಪೇಟೆಗೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಮೊಕದ್ದೆ ದಾಖಲಾಗಿದೆ.
ಮಣಿಮುತ್ತು ಹಾಗೂ ಪತ್ನಿ ಸರಸ್ವತಿ ನಡುವೆ ಆಗಾಗ್ಗೆ ಕೌಟುಂಬಿಕ ಕಲಹಗಳು ನಡೆಯುತ್ತಿತ್ತು. ನಿನ್ನೆ ದಿನ ಪತ್ನಿಯನ್ನು ನದಿಗೆ ತಳ್ಳುತ್ತೇನೆ ಎಂದು ತನ್ನ ಅತ್ತೆಯ ಬಳಿ ಹೇಳಿ ಹೇಮಾವತಿ ನದಿಯ ಪಂಪ್ಹೌಸ್ ಬಳಿ ಕರೆತಂದಿದ್ದ ಮಣಿಮುತ್ತು, ನಂತರ ತಾನೇ ನದಿಗೆ ಹಾರಿದ್ದ. ನಿನ್ನೆ ಸಂಜೆಯವರೆಗೂ ಶೋಧ ಕಾರ್ಯ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮೃತ ಮಣಿಮುತ್ತು ಪತ್ನಿ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.