ಗೋಣಿಕೊಪ್ಪಲು, ಜೂ. ೮: ಗೋಣಿಕೊಪ್ಪ, ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಯಶಸ್ವಿಯಾಯಿತು.

ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಯಮಾಡ ಪ್ರಥ್ವಿ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯ ಗ್ರಾಮಸ್ಥರ ಸಹಾಯದೊಂದಿಗೆ ಬೆಳಿಗ್ಗೆ ೯ ಗಂಟೆಗೆ ಕಾಡಾನೆಗಳನ್ನು ಓಡಿಸುವ ಕಾರ್ಯ ಆರಂಭಿಸಿದರು.

ಮಾಯಮುಡಿ ಸಮೀಪದ ಬಾಳಾಜಿ ಮಾರ್ಗವಾಗಿ ಮಧ್ಯಾಹ್ನ ವೇಳೆ ತಿತಿಮತಿ ಅರಣ್ಯ ಪ್ರದೇಶಕ್ಕೆ ೧೪ ಆನೆಗಳ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು. ತಾ. ೭ರ ಮುಂಜಾನೆ ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಎಚ್.ಎಸ್. ಕಾಲೋನಿಯ ನಿವಾಸಿ ರಂಗಸ್ವಾಮಿ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ ವೇಳೆ ಕಾಡಾನೆ ದಾಳಿ ನಡೆಸಿತ್ತು. ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಕೂಡಲೆ ಕಾಡಾನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳದಿದ್ದಲ್ಲಿ ಮುಖ್ಯ ರಸ್ತೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.

ಈ ವೇಳೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, ಕೂಡಲೆ ಕಾರ್ಯಾಚರಣೆ ನಡೆಸುವ ಭರವಸೆ ನೀಡಿದ್ದರು. ಅಧಿಕಾರಿಗಳು ನೀಡಿದ ಭರವಸೆಯಂತೆ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಪಟಾಕಿ ಸಿಡಿಸಿ,

(ಮೊದಲ ಪುಟದಿಂದ) ಬೆದರು ಗುಂಡು ಹೊಡೆದು ಕಾಡಾನೆಗಳನ್ನು ಕಾಡಿಗಟ್ಟಲಾಯಿತು.

ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯದ ಅಧಿಕಾರಿಗಳಾದ ರಾಜಪ್ಪ, ತಿತಿಮತಿ ಆರ್.ಎಫ್.ಓ. ಅಶೋಕ್ ಹುನಗುಂದ, ದಿವಾಕರ್, ಸಚಿನ್, ಸಿದ್ದಮಣಿ, ಅಂತೋಣಿ ಪ್ರಕಾಶ್, ರೈತ ಸಂಘದ ಮುಖಂಡರಾದ ಆಲೆಮಾಡ ಮಂಜುನಾಥ್, ಚೊಟ್ಟೆಕಾಳಪಂಡ ಮನು ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿದ್ದರು.

ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು. ಕಾರ್ಯಾಚರಣೆ ಹಿನ್ನೆಲೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ, ಸಬ್‌ಇನ್ಸ್ಪೆಕ್ಟರ್ ಸುಬ್ಬಯ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

- ಹೆಚ್.ಕೆ. ಜಗದೀಶ್,

ಎನ್.ಎನ್. ದಿನೇಶ್