ಮಡಿಕೇರಿ, ಜೂ. ೭: ಜೋಪಾಡಿಯಲ್ಲಿ ವಾಸವಿದ್ದ ವೃದ್ಧೆಗೆ ದಾನಿಗಳ ಮೂಲಕ ನೆರವು ಪಡೆದು ನಿರ್ಮಿಸಿದ ನೂತನ ಮನೆಯನ್ನು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹಸ್ತಾಂತರಿಸಿದರು.

ಪುಟಾಣಿನಗರದಲ್ಲಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದ ೭೦ ವರ್ಷದ ನಿಂಗಮ್ಮ ಎಂಬವರು ಒಡೆದ ಶೀಟುಗಳನ್ನು ಜೋಡಿಸಿಟ್ಟ ಜೋಪಡಿಯಲ್ಲಿ ವಾಸಿಸುತ್ತಿದ್ದರು, ಈ ಬಾರಿ ನೂತನವಾಗಿ ನಗರಸಭೆಗೆ ಚುನಾಯಿತರಾದ ಮಂಜುಳಾ ಮುರುಗನ್ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಹಲವು ದಾನಿಗಳ ಸಹಕಾರ ಪಡೆದು ರೂ ೧.೬೦ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ.

ಮನೆಯನ್ನು ಹಸ್ತಾಂತರಿಸಿ ಬಳಿಕ ಮಾತನಾಡಿದ ಶಾಸಕರು, ಜನಪ್ರತಿನಿಧಿಗಳು ಚುನಾವಣಾ ಪೂರ್ವ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಬಿಜೆಪಿ ಪ್ರತಿನಿಧಿಗಳು ಎಂದಿಗೂ ನುಡಿದಂತೆ ನಡೆಯುತ್ತಾರೆ. ವೃದ್ಧಾಪ್ಯದಲ್ಲಿ ಉತ್ತಮ ಮನೆಯಲ್ಲಿ ನಿಂಗಮ್ಮ ಜೀವನ ಸಾಗಿಸಲಿ. ಸರಕಾರದಿಂದ ಸಿಗುವ ಸವಲತ್ತನ್ನು ತಲುಪಿಸುವ ಕೆಲಸ ಮಾಡುತ್ತೇವೆ ಎಂದರು. ಬಳಿಕ ಮನೆಯ ಅಂಗಳದಲ್ಲಿ ಶಾಸಕರು ಸಸಿ ನೆಟ್ಟರು.

ಹೊಸ ಮನೆ ದೊರಕಿದ ಬಗ್ಗೆ ನಿಂಗಮ್ಮ ಹರ್ಷ ವ್ಯಕ್ತಪಡಿಸಿದರು. ಇರುವ ಮಗ ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಚಿಕ್ಕಪುಟ್ಟ ಕೆಲಸ ಮಾಡಿ ನನ್ನ ಬದುಕು ನಾನೇ ಕಟ್ಟಿಕೊಂಡಿದ್ದೇನೆ. ಬೀಳುವ ಹಂತದ ಜೋಪಾಡಿಯಿಂದ ಮುಕ್ತಿ ದೊರಕಿರುವುದು ಖುಷಿ ತಂದಿದೆ. ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೆ ಯಾರು ಸ್ಪಂದನ ನೀಡಿರಲಿಲ್ಲ. ನೂತನ ಸದಸ್ಯೆ ಮುತುವರ್ಜಿಯಿಂದ ಮನೆ ನಿರ್ಮಾಣವಾಗಿದೆ ಎಂದರು.

ಕೆಲವು ದಾನಿಗಳು ನಿಂಗಮ್ಮಗೆ ಅಗತ್ಯ ಆಹಾರ ಕಿಟ್, ಸಿಲಿಂಡರ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ನಗರಸಭಾ ಸದಸ್ಯರಾದ ಮಂಜುಳಾ ಮುರುಗನ್, ಅರುಣ್ ಶೆಟ್ಟಿ, ಕೆ.ಎಸ್. ರಮೇಶ್, ಸವಿತಾ ರಾಕೇಶ್, ಉಮೇಶ್ ಸುಬ್ರಮಣಿ, ಶ್ವೇತಾ, ಸಬಿತ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಖಜಾಂಜಿ ಮುರುಗನ್, ವಾರ್ಡ್ ಅಧ್ಯಕ್ಷ ವೇಣುಗೋಪಾಲ್, ಪ್ರಮುಖರಾದ ಚಾರ್ಲಿ, ಕಣ್ಣ, ಕಾವೇರಪ್ಪ ಸೇರಿದಂತೆ ಇನ್ನಿತರರು ಇದ್ದರು.