ಗೋಣಿಕೊಪ್ಪಲು, ಜೂ. ೭: ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಹಾರ ಕಿಟ್ ವಿತರಿಸಿದರು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರ ನಿಧನಕ್ಕೆ ಮೌನಾಚರಣೆ ಮಾಡಿ, ಸಂತಾಪ ಸೂಚಿಸಲಾಯಿತು. ಬಳಿಕ ಮಾತನಾಡಿದ ಶಾಸಕರಾದ ಕೆ.ಜಿ. ಬೋಪಯ್ಯ, ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ವೀರಾಜಪೇಟೆ ತಾಲೂಕು ಹಸಿರು ವಲಯಕ್ಕೆ ತಲುಪುತ್ತಿದೆ. ಇದರಲ್ಲಿ ಪತ್ರಕರ್ತರ ಪಾತ್ರವೂ ಇದ್ದು, ಸಂಕಷ್ಟ ದಲ್ಲಿರುವ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದರು. ಸಂಘದ ಸದಸ್ಯರಿಗೆ ಕಿಟ್ ಹಾಗೂ ಜಿಲ್ಲಾ ಸಂಘದಿAದ ನೀಡಲಾದ ಸ್ಯಾನಿಟೈಸರ್, ಮಾಸ್ಕ್, ಸಂಘದ ಗುರುತಿನ ಚೀಟಿ ನೀಡಲಾಯಿತ್ತು. ತಾಲೂಕು ಸಂಘದ ಉಪಾಧ್ಯಕ್ಷ ಆರ್. ಸುಬ್ರಮಣಿ, ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಸಹ ಕಾರ್ಯದರ್ಶಿ ಅಶೋಕ್, ಖಜಾಂಚಿ ವಿ.ವಿ. ಅರುಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ ಜಗದೀಶ್, ಎ.ಎನ್. ವಾಸು ಇದ್ದರು.