*ವೀರಾಜಪೇಟೆ, ಜೂ. ೬: ಕೆಪಿಸಿಸಿ ಕಾನೂನು ಘಟಕ ಹಾಗೂ ಮಾನವ ಹಕ್ಕು, ಆರ್.ಟಿ.ಐ. ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ವೀರಾಜಪೇಟೆ ಭಾಗದ ಒಂದು ಸಾವಿರ ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿದರು.

ನಗರದ ಸೆರೆನಿಟಿ ಸಭಾಂಗಣದಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಬಳಿಕ ಮಾತನಾಡಿದ ಎ.ಎಸ್ ಪೊನ್ನಣ್ಣ ಅವರು, ಕೊರೊನಾ ಪರಿಸ್ಥಿತಿಗೆ ಯಾರೂ ಕಾರಣರಲ್ಲ, ಆದರೆ ಪರಿಸ್ಥಿತಿ ನಿಯಂತ್ರಣ ಮಾಡಬೇಕಾದ್ದು ಸರ್ಕಾರದ ಕರ್ತವ್ಯ. ಅದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಆ್ಯಂಬ್ಯುಲೆನ್ಸ್, ಆಕ್ಸಿಜನ್, ಹಾಸಿಗೆ, ಚಿಕಿತ್ಸೆ ನೀಡುವುದರಲ್ಲಿ ಸೋತಿದೆ. ಈ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವ ಶಕ್ತಿಯಿರುವವರು ಮುಂದೆ ಬರಬೇಕು. ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಈ ಪರಿಸ್ಥಿತಿಯಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದರು.

ಚಾಮರಾಜನಗರ ಮಾಜಿ ಸಂಸದ ಧ್ರುವ ನಾರಾಯಣ ಮಾತನಾಡಿ, ರಾಜ್ಯ ಕಾಂಗ್ರೆಸ್ ಮುಖಂಡರುಗಳು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಲಹೆ ಮೇರೆಗೆ ಪಕ್ಷದ ಶಾಸಕರು, ಮಾಜಿ ಶಾಸಕರು ರಾಜ್ಯದಾದ್ಯಂತ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ. ಇದುವರೆಗೂ ಕಾಂಗ್ರೆಸ್ ಪಕ್ಷದಿಂದ ೨೮೦ ಆ್ಯಂಬ್ಯುಲೆನ್ಸ್ಗಳನ್ನು ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಲಾಗಿದೆ. ಕೋಟ್ಯಾಂತರ ಹಣ ಖರ್ಚು ಮಾಡಿ ರಾಜ್ಯದೆಲ್ಲೆಡೆ ಆಹಾರ ಕಿಟ್‌ಗಳನ್ನು ಮಾಡಲಾಗುತ್ತಿದೆ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ೨ನೇ ಕೊರೊನಾ ಅಲೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಸರ್ಕಾರ ರಾಜ್ಯದ ಎಲ್ಲಾ ಭಾಗಕ್ಕೂ ತಲುಪಲು ಸಾಧ್ಯವಾಗದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಆ ಕೆಲಸವನ್ನು ಮಾಡುತ್ತಿದೆ. ಈ ಬಾರಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬ್ಯುಲೆನ್ಸ್ ಕೊಡುಗೆ ನೀಡುವುದರ ಜೊತೆಗೆ ಪ್ರತಿಯೊಂದು ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಎ.ಎಸ್. ಪೊನ್ನಣ್ಣ ಅವರು ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಉಚ್ಚನ್ಯಾಯಾಲಯದ ವಕೀಲ ಚಂದ್ರಮೌಳಿ, ಡಿಸಿಸಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕೆಪಿಸಿಸಿ ಸಂಯೋಜಕ ಆರ್.ಕೆ ಸಲಾಂ, ಜಿ.ಪಂ. ಮಾಜಿ ಸದಸ್ಯ ಸರಿತಾ ಪೂಣಚ್ಚ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಧ್ರುವ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ ಪೃಥ್ವಿನಾಥ್, ಮೊಹಮ್ಮದ್ ರಾಫಿ, ಫಸಿಹಾ ತಬಸುಮ್ ಉಪಸ್ಥಿತರಿದ್ದರು.

ಪ.ಪಂ. ಸದಸ್ಯ ರಾಜೇಶ್ ಪದ್ಮನಾಭ ನಿರೂಪಿಸಿ, ಕಾಂಗ್ರೆಸ್ ಕಾನೂನು ಘಟಕದ ನರೇಂದ್ರ ಕಾಮತ್ ಸ್ವಾಗತಿಸಿ, ವಂದಿಸಿದರು.