ಮಡಿಕೇರಿ, ಜೂ. ೬ : ಅಮೇರಿಕಾದ ಆರೋಗ್ಯ ಸಚಿವಾಲಯದಲ್ಲಿ ಸರ್ಜನ್ ಜನರಲ್ ಆಗಿರುವ ಡಾ. ವಿವೇಕ್‌ಮೂರ್ತಿ ಅವರ ತಂದೆ ಡಾ. ನರಸಿಂಹಮೂರ್ತಿ ನೇತೃತ್ವದ ಸ್ಕೋಪ್ ಫೌಂಡೇಶನ್ ಮೂಲಕ ಕೊಡಗು ವೈದ್ಯಕೀಯ ಕಾಲೇಜಿಗೆ ನೀಡಲಾದ ರೂ. ೭೦ ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಫೌಂಡೇಷನ್ ಪರವಾಗಿ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಹಸ್ತಾಂತರಿಸಿದರು.

ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಆಯೋಜಿತ ಸರಳ ಕಾರ್ಯಕ್ರಮದಲ್ಲಿ ಸ್ಕೋಪ್ ಫೌಂಡೇಶನ್ ನಿಂದ ನೀಡಲ್ಪಟ್ಟ ೯೫ ಸಾವಿರ ಕೆಎನ್. ೯೫ ಮಾಸ್ಕ್, ೫ ಲೀ ಸಾಮರ್ಥ್ಯದ ೧೫ ಆಕ್ಸಿಜನ್ ಕಾನ್ಸ್ಟ್ರೇಷನ್‌ಗಳು, ೧೨ ಸಾವಿರ ತ್ರಿಲೇಯರ್ ಮಾಸ್ಕ್ಗಳು, ೬,೨೦೦ ಫೇಸ್ ಶೀಲ್ಡ್ಗಳು, ೨೫ ಥರ್ಮೋಮೀಟರ್, ೨೫ ಟ್ಯೂಬ್‌ಸ್ಪೆಪ್ ಡೌನ್ ಟ್ರಾನ್ಸ್ಫರ್, ೫೦ ವೈಪ್ಸ್ ಸೇರಿದಂತೆ ೧೮೦೦ ಕೆಜಿ ತೂಕವಿದ್ದ ವೈದ್ಯಕೀಯ ಉಪಕರಣಗಳನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಅಮೇರಿಕಾದ ಮಯಾಮಿಯಿಂದ ಜೂಮ್ ತಂತ್ರಜ್ಞಾನದ ಮೂಲಕ ಮಾತನಾಡಿದ ಡಾ. ವಿವೇಕ್ ಮೂರ್ತಿ ಅವರ ತಂದೆ ಮಂಡ್ಯದ ಹಲ್ಲಗೆರೆ ಗ್ರಾಮ ಮೂಲದವರಾದ ಸ್ಕೋಪ್ ಫೌಂಡೇಶನ್ ಅಧ್ಯಕ್ಷರೂ ಆಗಿರುವ ಡಾ. ನರಸಿಂಹಮೂರ್ತಿ, ತಾನು ಕಾವೇರಿ ನೀರು ಕುಡಿದು ಬೆಳೆದವನಾಗಿದ್ದು, ಕಾವೇರಿ ತಾಯಿಯ ಋಣ ತನ್ನ ಮೇಲಿದೆ. ಹೀಗಾಗಿಯೇ ಕಾವೇರಿ ತವರು ಜಿಲ್ಲೆಯಾದ ಕೊಡಗಿಗೆ ವೈದ್ಯಕೀಯ ಉಪಕರಣಗಳನ್ನು ಸ್ಕೋಪ್ ಫೌಂಡೇಷನ್ ಮೂಲಕ ನೀಡಿದ್ದಾಗಿ ಹೇಳಿದರು. ಬಾಲ್ಯದಿಂದಲೂ ಕೊಡಗಿನ ಪ್ರಕೃತಿ, ಕೊಡಗಿನ ವೀರಸೇನಾನಿಗಳಾದ ಫೀಲ್ಡ್ ಮಾರ್ಷಲ್

(ಮೊದಲ ಪುಟದಿಂದ) ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಶಿಸ್ತಿನ ಗುಣಗಳನ್ನು ಮಾದರಿಯಾಗಿರಿಸಿ ಕೊಂಡಿದ್ದೆ. ಭಾರತದಲ್ಲಿ ಕೊಡಗು ದೇಶಪ್ರೇಮಕ್ಕೆ ಕೇಂದ್ರ ಇದ್ದಂತೆ. ಕೊಡಗಿನ ಜನತೆಯ ದೇಶಪ್ರೇಮ ಅವಿಸ್ಮರಣೀಯವಾದದ್ದು, ಜನರಲ್ ಕಾರ್ಯಪ್ಪ ಅವರನ್ನೂ ತಾನು ಹಿಂದೊಮ್ಮೆ ಭೇಟಿಯಾಗಿದ್ದೆ. ದೇಶಪ್ರೇಮದ ಪ್ರತೀಕ ಹೆಮ್ಮೆಯ ಕಾರ್ಯಪ್ಪ ಅವರಾಗಿದ್ದಾರೆ. ಕೊಡಗಿನ ಜನರ ಪ್ರೀತಿ, ವಾತ್ಸಲ್ಯ ಹಿರಿದಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೊಡಗಿನ ಮೇಲೆ ತನ್ನ ಪ್ರೀತಿ ಹೆಚ್ಚಿದೆ. ಕೋವಿಡ್ ಸಂಕಷ್ಟದಲ್ಲಿರುವ ಕೊಡಗಿಗೆ ಈ ಮೂಲಕ ಸಣ್ಣ ನೆರವು ನೀಡುತ್ತಿರುವುದಾಗಿ ಹೇಳಿದರು.

ಕೊಡ್ಲಿಪೇಟೆಯ ಆತ್ಮೀಯ ಗೆಳೆಯರಾದ ವಕೀಲ ಚಂದ್ರಮೌಳಿ ಕೋರಿದ ಮೇರೆಗೆ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾಗಿಯೂ ಅವರು ಹೇಳಿದರು. ಸ್ಕೋಪ್ ಫೌಂಡೇಶನ್‌ಗೆ ವಿವಿಧ ದೇಶಗಳಲ್ಲಿ ಉದಾರವಾಗಿ ಆರ್ಥಿಕ ನೆರವು ನೀಡುವ ದಾನಿಗಳಿದ್ದಾರೆ. ಹೀಗಾಗಿ ಅವರೆಲ್ಲರ ಪ್ರಯತ್ನದಿಂದಾಗಿ ಕೊಡಗು ಮತ್ತು ಮಂಡ್ಯ ಜಿಲ್ಲೆಗೆ ರೂ. ೨.೪೦ ಕೋಟಿ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ನೀಡುತ್ತಿರುವುದಾಗಿಯೂ ಡಾ.ಲಕ್ಷಿö್ಮ ನರಸಿಂಹಮೂರ್ತಿ ಮಾಹಿತಿ ನೀಡಿದರು.

ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ತಾನು ಮತ್ತು ಡಾ. ನರಸಿಂಹಮೂರ್ತಿ ಆತ್ಮೀಯ ಗೆಳೆಯರಾಗಿದ್ದು, ತನ್ನ ಕೋರಿಕೆಯನ್ನು ಮನ್ನಿಸಿ ಅಮೇರಿಕಾದದಿಂದ ಇಷ್ಟೊಂದು ದೊಡ್ಡ ನೆರವನ್ನು ನೀಡಿದ್ದಾರೆ. ಗೆಳೆತನಕ್ಕೆ ಸಿಕ್ಕಿದ ಬಹಳ ದೊಡ್ಡ ಕೊಡುಗೆ ಇದಾಗಿದೆ ಎಂದರು. ಈ ಕೊಡುಗೆಯಲ್ಲಿ ಯಾವುದೇ ರಾಜಕೀಯ ಇಲ್ಲ. ಕೊಡಗಿನವನಾಗಿ ಜಿಲ್ಲೆಯ ಮೇಲಿನ ಅಭಿಮಾನದಿಂದ ಇಷ್ಟು ದೊಡ್ಡ ಮೊತ್ತದ ಕೊಡುಗೆ ನೀಡಲು ಪ್ರಯತ್ನಿಸಿದ್ದಾಗಿಯೂ ಚಂದ್ರಮೌಳಿ ಸ್ಪಷ್ಟಪಡಿಸಿದರು. ಸ್ಕೋಪ್ ಫೌಂಡೇಷನ್‌ನಿAದ ದೊರಕಿದ ನೆರವು ಕೊಡಗಿನಲ್ಲಿ ಸೂಕ್ತ ರೀತಿಯಲ್ಲಿ ಫಲಾನುಭವಿಗಳಿಗೆ ದೊರಕಬೇಕೆಂದು ಆಶಯ ವ್ಯಕ್ತಪಡಿಸಿದ ಚಂದ್ರಮೌಳಿ, ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಈ ಆಧುನಿಕ ವೈದ್ಯಕೀಯ ಉಪಕರಣಗಳು ಖಂಡಿತಾ ಸಹಕಾರಿಯಾಗುತ್ತದೆ ಎಂದು ವಿಶ್ವಾಸದಿಂದ ನುಡಿದರು.

ಸ್ಕೋಪ್ ಫೌಂಡೇಷನ್ ಮತ್ತು ಕೊಡಗು ವೈದ್ಯಕೀಯ ಆಸ್ಪತ್ರೆಯ ನಡುವೆ ಸಂಪರ್ಕ ಸಾಧಿಸುವಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪಾತ್ರವನ್ನು ಚಂದ್ರಮೌಳಿ ಶ್ಲಾಘಿಸಿದರು. ಜಿಲ್ಲಾಧಿಕಾರಿಗೆ ಕೊಡಗು ಜಿಲ್ಲೆಯನ್ನು ಆರೋಗ್ಯಪೂರ್ಣ ಜಿಲ್ಲೆಯಾಗಿಸುವ ಭದ್ದತೆ ಇದೆ. ಹೀಗಾಗಿಯೇ ಅಮೇರಿಕಾದಿಂದ ಸುಸೂತ್ರವಾಗಿ ವೈದ್ಯಕೀಯ ಸಾಮಾಗ್ರಿಗಳು ಜಿಲ್ಲೆಗೆ ಬರಲು ಸಾಧ್ಯವಾಯಿತು ಎಂದೂ ಚಂದ್ರಮೌಳಿ ಸ್ಮರಿಸಿಕೊಂಡರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಕೊಡಗು ವೈದ್ಯಕೀಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ಸ್ಕೋಪ್ ಫೌಂಡೇಷನ್‌ಗೆ ಜಿಲ್ಲಾಡಳಿತದಿಂದ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರಲ್ಲದೇ, ಕೋವಿಡ್ ಸಮಸ್ಯೆಯ ಈ ದಿನಗಳಲ್ಲಿ ಬಹಳಷ್ಟು ದಾನಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ನೆರವು ನೀಡುತ್ತಿರುವುದಾಗಿಯೂ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರಾ ಮಾತನಾಡಿ, ಸ್ಕೋಪ್ ಫೌಂಡೇಶನ್‌ನ ನೆರವನ್ನು ಶ್ಲಾಘಿಸಿದರು.

ಕೊಡಗು ಜಿಲ್ಲೆಯ ಜನತೆಯ ಪರವಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಸ್ಕೋಪ್ ಫೌಂಡೇಷನ್‌ನ ಸರ್ವ ದಾನಿಗಳಿಗೂ ಕೊಡಗಿನ ಜನತೆ ಅಬಾರಿಯಾಗಿದ್ದಾರೆ ಎಂದು ಡಾ. ಹಲ್ಲಗೆರೆ ನರಸಿಂಹಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಮೈತ್ರಿ ನರಸಿಂಹಮೂರ್ತಿ, ಅರುಣ ಚಂದ್ರಮೌಳಿ ಕೂಡ ಈ ಸಂದರ್ಭ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾರ್ಯಪ್ಪ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಆಡಳಿತಾಧಿಕಾರಿ ನಂಜುAಡೇಗೌಡ, ಡಾ. ಮಂಜುನಾಥ್, ಡಾ. ರೂಪೇಶ್, ಡಾ. ಉದಯಕುಮಾರ್, ಹಾಜರಿದ್ದರು.