ಮ.ಜೂ.೬; ಕೂಲಿ ಕೆಲಸ ಮಾಡುತ್ತಾ ., ತಲೆಗೊಂದು ಸೂರಿಲ್ಲದೆ ಒಡೆದ ಶೀಟುಗಳನ್ನು ಜೋಡಿಸಿಟ್ಟ ನೆರಳಿನಡಿಯಲ್ಲಿ ಸಂಧ್ಯಾಕಾಲದ ಸಮಯ ದೂಡುತ್ತಿದ್ದ ವೃದ್ಧ ಮಹಿಳೆಗೆ ತಾನಿರುವ ವಾರ್ಡಿನ ಸದಸ್ಯರು, ದಾನಿಗಳು ಹಣ ಸಂಗ್ರಹಿಸಿ ಚಂದದ ಮನೆ ಕಟ್ಟಿಕೊಟ್ಟಿದ್ದಾರೆ.
ಪುಟಾಣಿನಗರದ ನಿಂಗಮ್ಮ(೭೦) ಕಳೆದ ೨೦ ವರ್ಷಗಳಿಂದ ನೆಲೆಸಿದ್ದು, ಜಾಗವಿದ್ದರೂ ಮನೆ ಇರಲಿಲ್ಲ. ಅಲ್ಲಿ, ಇಲ್ಲಿ ಸಿಕ್ಕಿದ, ಯಾರ್ಯಾರೋ ಎಸೆದಿದ್ದ, ಒಡೆದ ಶೀಟು ಗಳನ್ನು ಜೋಡಿಸಿಟ್ಟು ಕೊಂಡು ಅದರೊಳಗಡೆ ಜೀವಿಸುತ್ತಿದ್ದರು. ಅಡುಗೆ, ನಿದ್ರೆ ಎಲ್ಲವೂ ಆ ಕತ್ತಲ ಕೂಪದಲ್ಲಿಯೇ ಆಗುತ್ತಿತ್ತು. ಸ್ನಾನ, ಇನ್ನಿತರ ಕಾರ್ಯ ಗಳು ಹೊರಗಡೆ ಆಗುತ್ತಿತ್ತು.
ಮೂವರು ಸದಸ್ಯರಾದರು
ಪುಟಾಣಿ ನಗರಕ್ಕೆ ಕಳೆದ ೨೦ ವರ್ಷಗಳಲ್ಲಿ ಮೂವರು ನಗರಸಭಾ ಸದಸ್ಯರುಗಳು ಬಂದು ಹೋದರು. ಮೂವರ ಬಳಿಯೂ ಒಂದು ಪುಟ್ಟ ಮನೆ ಕಟ್ಟಿಕೊಡಿ ಎಂದು ಅಂಗಲಾಚಿದರೂ ಯಾರೂ ಆ ಕಾರ್ಯಕ್ಕೆ ಮುಂದಾಗಿಲ್ಲ. ಸೂರಿಲ್ಲದವರಿಗೆ ಮನೆ ಕಟ್ಟಿ ಕೊಡುವ ಆಶ್ರಯ ಮನೆ ಯೋಜನೆಯಿದ್ದರೂ ಯಾರೂ ಕೂಡ ಆಸಕ್ತಿ ತೋರಿಲ್ಲ. ಬದಲಿಗೆ ನಿಂಗಮ್ಮನ ಕೈಗೆ ಹತ್ತು, ಇಪ್ಪತ್ತು ಕೊಟ್ಟು ಜಾರಿಕೊಂಡರು.
ಮಾನವೀಯತೆ ಮೆರೆದರು
ಈ ಬಾರಿಯೂ ನಗರಸಭೆಗೆ ಚುನಾವಣೆ ಬಂದಿತು. ವಾರ್ಡಿನಿಂದ ಸ್ಪರ್ಧೆ ಮಾಡಿದ್ದ ಮಂಜುಳ ಹಾಗೂ ಪತಿ ಮುರುಗನ್ ಈ ನಿಂಗಮ್ಮನಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಅದರಂತೆ ಸ್ನೇಹಿತರೆಲ್ಲ ಸೇರಿ ತಾವೇ ಹಣ ಹಾಕಿ ಮನೆ ಕಟ್ಟಿದ್ದಾರೆ. ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಖಜಾಂಚಿ ಮುರುಗನ್, ಚಾರ್ಲಿ, ಕಣ್ಣ, ವೇಣುಗೋಪಾಲ್, ಸೇರಿದಂತೆ ಇತರ ಇಪ್ಪತಕ್ಕೂ ಮಂದಿ ಕೈಯಿಂದ ಹಣ ಹಾಕಿ ಚೊಕ್ಕವಾದ ಮನೆಯೊಂದನ್ನು ನಿರ್ಮಿಸಿದ್ದಾರೆ. ರೂ.ಒಂದೂವರೆ ಲಕ್ಷದಲ್ಲಿ ಮನೆ ತಲೆಯೆತ್ತಿ ನಿಂತಿದ್ದು, ಇದರ ಉದ್ಘಾಟನೆ ತಾ.೭ರಂದು(ಇAದು) ನಡೆಯಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನೆ, ಪೂಜೆ, ಇನ್ನಿತರ ವೆಚ್ಚಗಳನ್ನು ಕೂಡ ಈ ದಾನಿಗಳೇ ಭರಿಸಲಿದ್ದಾರೆ. ಅಂತೂ ಇಂತೂ ಬಡ ವೃದ್ಧೆ ನಿಂಗಮ್ಮಳಿಗೆ ಶಾಶ್ವತ ಸೂರೊಂದು ದಕ್ಕಿದ್ದು, ದಾನಿಗಳನ್ನು ಸ್ಮರಿಸುತ್ತಾ ಸಂತಸದಲ್ಲಿದ್ದಾರೆ.
- ಸಂತೋಷ್