ಸೋಮವಾರಪೇಟೆ, ಜೂ. ೫: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ಕೃಷಿಕರು ನೆಮ್ಮದಿ ಕಳೆದುಕೊಂಡಿದ್ದು, ಕೂತಿ ಗ್ರಾಮದಲ್ಲಿ ದಾಂಧಲೆ ನಡೆಸಿದ ಕಾಡಾನೆಗಳ ಹಿಂಡು ಕುಂದಳ್ಳಿಗೆ ಲಗ್ಗೆಯಿಟ್ಟಿವೆ.

ಕೂತಿ ಗ್ರಾಮದ ಕೆ.ಡಿ. ಗಿರೀಶ್ ಅವರಿಗೆ ಸೇರಿದ ತೋಟಕ್ಕೆ ಲಗ್ಗೆಯಿಟ್ಟು ನೂರಾರು ಕಾಫಿ ಗಿಡಗಳು ಹಾಗೂ ಫಸಲು ಬಿಟ್ಟಿದ್ದ ಬಾಳೆಯನ್ನು ಧ್ವಂಸ ಮಾಡಿರುವ ಕಾಡಾನೆ ಹಿಂಡು, ಇಂದು ಕುಂದಳ್ಳಿ ಗ್ರಾಮದ ಸತೀಶ್ ಎಂಬವರ ಕಾಫಿ ತೋಟದಲ್ಲಿ ದಾಂಧಲೆ ನಡೆಸಿವೆ.

ಸತೀಶ್ ಅವರ ತೋಟದಲ್ಲಿ ಸಂಚರಿಸಿ ಕಾಫಿ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕಾಡಾನೆಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಇಲಾಖೆ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.

ಕೂತಿ, ಕುಂದಳ್ಳಿ, ನಗರಳ್ಳಿ ಸೇರಿದಂತೆ ಸುತ್ತಮುತ್ತಲ ಜನವಸತಿ, ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಕೃಷಿ ಫಸಲು ನಷ್ಟವಾಗುತ್ತಿದೆ. ರಸ್ತೆಗಳಲ್ಲಿ ಸಂಚರಿಸಲೂ ಭಯಪಡುವಂತಾಗಿದೆ. ಗದ್ದೆ, ತೋಟಗಳಲ್ಲಿ ಕೆಲಸ ಮಾಡಲೂ ಹೆದರಿಕೆಯಾಗುತ್ತಿದೆ. ಆದರೂ ಸಹ ಅರಣ್ಯ ಇಲಾಖೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.