ಗೋಣಿಕೊಪ್ಪಲು, ಜೂ. ೬: ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ನಡೆಸುವ ಸದಸ್ಯರು ತಮ್ಮ ಗ್ರಾಮದ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಕೈಗೊಂಡ ಕ್ರಮಗಳನ್ನು ಗ್ರಾಮದ ಜನರು ಶ್ಲಾಘಿಸಿದ್ದಾರೆ.
ದೂರದ ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಮನಗಂಡ ಪಂಚಾಯಿತಿ ಸದಸ್ಯರು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯವಸ್ಥೆ ಕಲ್ಪಿಸಿದರೆ ಇನ್ನಷ್ಟು ಜನರಿಗೆ ಅನುಕೂಲ ಕಲ್ಪಿಸಿದಂತಾಗಲಿದೆ ಎಂದು ನಿರ್ಧಾರ ಕೈಗೊಂಡ ಪಂಚಾಯಿತಿ ಆಡಳಿತ ಮಂಡಳಿ ಶಾಸಕ ಕೆ.ಜಿ. ಬೋಪಯ್ಯ ಅವರ ಗಮನಕ್ಕೆ ತಂದು ಗ್ರಾಮದ ಜನರಿಗೆ ಕೋವಿಡ್ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕಿರುಗೂರು ಪಂಚಾಯತಿ ವ್ಯಾಪ್ತಿಯಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದವು.
ಈ ಸಂದರ್ಭ ಇದನ್ನು ಹತೋಟಿಗೆ ತರಲು ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ಚಪ್ಪುಡೀರ ರಾಕೇಶ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೂಲಕ ಆಯ್ದ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಅಲ್ಲಿದ್ದ ಸೋಂಕಿತ ಕುಟುಂಬಗಳಿಗೆ ಪಂಚಾಯಿತಿ ವತಿಯಿಂದ ಆಹಾರ ಕಿಟ್ಗಳು ಸೇರಿದಂತೆ ಇನ್ನಿತರ ಪ್ರಮುಖ ಪ್ರಯೋಜನಗಳನ್ನು ನೀಡಲಾಗಿತ್ತು.
ಕೋವಿಡ್ ನಿಯಮ ಪಾಲನೆ ಯೊಂದಿಗೆ ಪಂಚಾಯಿತಿ ಅಧ್ಯಕ್ಷರು, ಸದಸ್ಯರು,ಸಿಬ್ಬಂದಿಗಳು ದಿನಪೂರ್ತಿ ಲಸಿಕೆ ಕೇಂದ್ರದಲ್ಲಿ ಖುದ್ದಾಗಿ ಹಾಜರಿದ್ದು, ತಮ್ಮ ಗ್ರಾಮದ ಜನರಿಗೆ ಕೋವಿಡ್ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಂಚಾಯತಿ ವ್ಯಾಪ್ತಿಯ ಕಿರುಗೂರು, ಮತ್ತೂರು ಹಾಗೂ ಮುಗುಟಗೇರಿಯ ಪ್ರತಿ ನಾಗರಿಕರಿಗೆ ಕೋವಿಡ್ ಲಸಿಕೆ ಹಾಕಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ,ಇನ್ನೂ ಕೆಲವು ದಿನಗಳಲ್ಲಿ ಕೋವಿಡ್ ಮುಕ್ತ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಟಾಸ್ಕ್ ಫೋರ್ಸ್ ಅಧ್ಯಕ್ಷ ಚಪ್ಪುಡೀರ ರಾಕೇಶ್, ಪಂಚಾಯಿತಿ ಅಧ್ಯಕ್ಷ ಪುತ್ತಮನೆ ಜೀವನ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.