ಚೆಟ್ಟಳ್ಳಿ, ಜೂ. ೪: ಕಾನೂನಿನ ಆದೇಶದ ಮೇರೆಗೆ ದುಬಾರೆಯ ಸಾಕಾನೆ ಕುಶನನ್ನು ಕಾಡಿಗೆ ಬಿಡಲು ಆದೇಶವಾಗುತ್ತಿದ್ದಂತೆ ಪಳಗಿದ ಆನೆಯನ್ನು ಲಾರಿಯಲ್ಲಿ ತಾ. ೩ರ ರಾತ್ರಿ ೮.೩೦ಕ್ಕೆ ಬಂಡೀಪುರದ ಹುಲಿ ಮೀಸಲು ಅರಣ್ಯದಲ್ಲಿ ಬಿಡುವ ಸಂದರ್ಭ ಕುಶ ಕಣ್ಣೀರಿಡುವುದನ್ನು ಕಂಡು ಪಳಗಿದ ಮಾವುತರು ಹಾಗೂ ಕಾವಾಡಿಗರು ಭಾವುಕರಾದರು.

ಲಾರಿಯಲ್ಲಿ ಬಿಗಿದ ಹಗ್ಗವನ್ನು ಬಿಚ್ಚಿ ಕುಶನನ್ನು ಲಾರಿಯಿಂದ ಇಳಿಯಲು ಹೇಳಿದ ತಕ್ಷಣ ಕೆಳಗಿಳಿದು ಅರಣ್ಯದೊಳಗೆ ಹೋಗ ಬೇಕಾದ ಕುಶ ತನ್ನ ಮಾವುತರ ಸಮೀಪವೇ ನಿಂತುಕೊAಡಿತು. ಬಂಡೀಪುರ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ವೈದ್ಯರು ಕುಶನನ್ನು ಪರೀಕ್ಷಿಸಿದರು. ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳಾದ ಆರ್‌ಎಫ್‌ಓ ಅನನ್ಯಕುಮಾರ್ ಹಾಗೂ ಡಿಆಫ್‌ಓ ಕನ್ನಂಡ ರಂಜನ್ ಮಾವುತರು ಹಾಗೂ ಕಾವಾಡಿಗಳು ತಂದಿದ್ದ ಬೆಲ್ಲ ತಿನ್ನಿಸಿ ಬೆನ್ನು ತಟ್ಟಿ ಕಳುಹಿಸಿದರು ಹೋಗಲೇ ಇಲ್ಲ.

ಸ್ವಲ್ಪ ಸಮಯದ ನಂತರ ಕುಶನು ಪಕ್ಕದ ಕೆರೆಯ ನೀರನ್ನು ಕುಡಿಯಲು ತೆರಳಿ ನೀರು ಕುಡಿಯುತ್ತಿದ್ದಂತೆ ದುಬಾರೆಯ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕುಶನನ್ನು ಬಿಟ್ಟು ಹಿಂದಿರುಗಿದರು.

-ಕರುಣ್ ಕಾಳಯ್ಯ