ಸೋಮವಾರಪೇಟೆ, ಜೂ. ೨: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕ್‌ನಲ್ಲಿ ರಸ್ತೆ ಬದಿಯಲ್ಲಿ ಉಪಯೋಗಿಸಿದ ಮಾಸ್ಕ್ ಹಾಗೂ ಇತರ ತ್ಯಾಜ್ಯ ಗಳನ್ನು ಎಸೆಯುತ್ತಿರುವ ದುರುಳರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಬಿಎಸ್‌ಎನ್‌ಎಲ್ ಕಚೇರಿ ಎದುರು ಭಾಗದ ರಸ್ತೆಯಿಂದ ರೇಂಜರ್ ಬ್ಲಾಕ್‌ಗೆ ತೆರಳುವ ತಿರುವು ಪ್ರದೇಶದಲ್ಲಿ ಬಳಸಿದ ನೂರಾರು ಮಾಸ್ಕ್ಗಳು, ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಬೀದಿ ನಾಯಿಗಳು ಇವುಗಳನ್ನು ಎಳೆದು ರಸ್ತೆಯಲ್ಲಿ ಚೆಲ್ಲಾಡುತ್ತಿವೆ. ತ್ಯಾಜ್ಯದಿಂದಾಗಿ ಈ ಪ್ರದೇಶ ಗಬ್ಬೆದ್ದು ಹೋಗಿದ್ದು, ಅಶುಚಿತ್ವ ತಾಂಡವವಾಡುತ್ತಿದೆ.

ಮಾಸ್ಕ್ಗಳನ್ನು ಬಳಸಿದ ನಂತರ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಸಾರ್ವಜನಿಕ ಸ್ಥಳದಲ್ಲಿ ಹಾಕುತ್ತಿರುವ ದುರುಳರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಇದರೊಂದಿಗೆ ಈ ಸ್ಥಳದಲ್ಲಿ ಕಸವನ್ನು ಹಾಕದಂತೆ ಪ.ಪಂ. ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿರುವ ಸ್ಥಳೀಯರು, ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.