ಕುಶಾಲನಗರ, ಜೂ. ೩: ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿ ಹಲವು ವಾರಗಳೇ ಕಳೆದಿವೆ. ಲಾಕ್ಡೌನ್ ಪರಿಣಾಮ ಪಟ್ಟಣ ಗ್ರಾಮಗಳ ವ್ಯಾಪ್ತಿಯ ಬಹುತೇಕ ವಾಣಿಜ್ಯ ಕಟ್ಟಡಗಳ ವ್ಯಾಪಾರ ವಹಿವಾಟು ಸ್ಥಗಿತಗೊಂಡ ಕಾರಣ ಕಲುಷಿತ ತ್ಯಾಜ್ಯ ಉತ್ಪಾದನೆ ಸ್ಥಗಿತಗೊಂಡಿದ್ದು, ಕಾವೇರಿ ನದಿಗೆ ನೇರವಾಗಿ ಹರಿವು ತಪ್ಪಿದಂತಾಗಿದೆ. ನಿರಂತರವಾಗಿ ವಿವಿಧ ತ್ಯಾಜ್ಯದಿಂದಾಗಿ ಕಲುಷಿತಗೊಳ್ಳುತ್ತಿದ್ದ ಜೀವನದಿಯ ನೀರಿನ ಹರಿವಿನ ಗುಣಮಟ್ಟ ಏರುಪೇರಾಗುತ್ತಿತ್ತು.
ಇದೀಗ ಕಳೆದ ಎರಡು ತಿಂಗಳಿನಿAದ ಪಟ್ಟಣ ಗ್ರಾಮಗಳ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿಯ ಸೇರದಿರುವುದು ಕಾವೇರಿ ನೀರಿನ ಹರಿವಿನ ಗುಣಮಟ್ಟ ಬಹುತೇಕ ಏರಿಕೆ ಕಂಡುಬAದಿದೆ. ಭಾಗಮಂಡಲದಿAದ ಕೂಡಿಗೆ ಮೂಲಕ ಹರಿಯುವ ನದಿಯ ನೀರಿನ ಗುಣಮಟ್ಟ ಸಾಮಾನ್ಯವಾಗಿ ಬಿ ಗ್ರೇಡ್ನಲ್ಲಿದ್ದು, ಈ ವ್ಯಾಪ್ತಿಯಲ್ಲಿ ೧೧ ಕಡೆ ನೀರಿನ ಗುಣಮಟ್ಟ ಪರಿಶೀಲನೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ತಿಂಗಳು ಈ ಕೇಂದ್ರಗಳಲ್ಲಿ ನದಿ ನೀರು ಸಂಗ್ರಹಿಸಿ ಗುಣಮಟ್ಟ ಪರಿಶೀಲನೆಗೆ ಮೈಸೂರು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಪರಿಸರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಭಾಗಮಂಡಲ, ನಾಪೋಕ್ಲು, ಕುಶಾಲನಗರ, ಕೂಡಿಗೆ, ಕೂಟು ಹೊಳೆ ವ್ಯಾಪ್ತಿಯಲ್ಲಿ ಸೇರಿದಂತೆ ೧೧ ಕಡೆ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆ. ಕೇರಳ ಕಡೆಗೆ ಹರಿಯುತ್ತಿರುವ ಪಯಸ್ವಿನಿ ನದಿಯ ನೀರಿನ ಹರಿವಿನ ಗುಣಮಟ್ಟ ಇನ್ನೂ ಕಲುಷಿತಗೊಳ್ಳದೇ ತನ್ನ ಮೂಲ ಸ್ವರೂಪವನ್ನು ಕಾಪಾಡಿಕೊಂಡು, ನೀರು ಎ ಗ್ರೇಡ್ನಲ್ಲಿ ಇರುವುದಾಗಿ ಪರಿಸರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ ನದಿ ಹರಿಯುವ ೨೩ ಗ್ರಾಮ ಪಂಚಾಯಿತಿ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತಿರುವ ಲಕ್ಷಾಂತರ ಲೀಟರ್ ಪ್ರಮಾಣದ ಕಲುಷಿತ ತ್ಯಾಜ್ಯ ನೇರವಾಗಿ ನದಿಗೆ ಹರಿಯುತ್ತಿದ್ದು, ಈ ಮೂಲಕ ನದಿ ನೀರಿನ ಗುಣಮಟ್ಟ ಕುಸಿತ ಉಂಟಾಗಲು ಪ್ರಮುಖ ಕಾರಣವಾಗಿದೆ. ಪ್ರಮುಖ ಪಟ್ಟಣಗಳ ಒಳಚರಂಡಿ ಯೋಜನೆಗಳು ಕೂಡ ಇನ್ನೂ ಅಪೂರ್ಣಗೊಂಡಿದ್ದು, ಇದರಿಂದ ನದಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಯೋಜನೆಗಳು ಪೂರ್ಣಗೊಂಡಲ್ಲಿ ಮಾತ್ರ ಶಾಶ್ವತವಾಗಿ ಸ್ವಚ್ಛ ಕಾವೇರಿ ಕಾಣಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು. ಪ್ರಸಕ್ತ ಲಾಕ್ಡೌನ್ ಹಿನ್ನೆಲೆ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡು ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ಬಹುತೇಕ ಸ್ವಚ್ಛಂದವಾಗಿ ಹರಿಯುತ್ತಿರುವಂತೆ ಭಾಸವಾಗುತ್ತಿದೆ. - ಚಂದ್ರಮೋಹನ್