ಸುಂಟಿಕೊಪ್ಪ, ಜೂ. ೩: ಕೊರೊನಾದಿಂದ ಕೂಲಿ ಕೆಲಸ, ವ್ಯಾಪಾರವು ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಸುಂಟಿಕೊಪ್ಪ ವ್ಯಾಪ್ತಿಯ ಹಲವಾರು ಕೂಲಿ ಕಾರ್ಮಿಕರು ಎದುರಿಸುತ್ತಿದ್ದಾರೆ. ಅಲ್ಲದೆ ಇವರಿಗೆ ಮನೆಯ ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗದೆ ಮಾರುಕಟ್ಟೆಯನ್ನೇ ವಾಸಸ್ಥಾನವಾಗಿ ಮಾಡಿಕೊಂಡಿದ್ದಾರೆ. ಇವರ ದಯನೀಯ ಸ್ಥಿತಿಯನ್ನು ಅರಿತುಕೊಂಡ ಸುಂಟಿಕೊಪ್ಪದ ಟಿಂಬರ್ ವ್ಯಾಪಾರಿ ಶಿವರಾಂ ರೈ ಬಡಾವಣೆಯ ನಿವಾಸಿ ಬಾಪುಟ್ಟಿ ಎಂಬವರು ಲಾಕ್‌ಡೌನ್ ಆರಂಭಿಕ ದಿನದಿಂದ ಇಂದಿನವರೆಗೂ ಪ್ರತಿದಿನ ರಾತ್ರಿ ೮ ಗಂಟೆಗೆ ತನ್ನ ಮನೆಯಲ್ಲಿ ಕುಟುಂಬದವರು ತಯಾರಿಸಿದ ಊಟವನ್ನು ಹನ್ನೆರಡು ಮಂದಿಗೆ ವಾಹನದಲ್ಲಿ ತಂದು ಅವರೇ ಹಸಿದವರಿಗೆ ಅನ್ನ - ಸಾಂಬಾರು ಬಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಾರದಲ್ಲಿ ೨ ದಿನ ಕೋಳಿ ಮಾಂಸದ ಅಡುಗೆ, ಒಂದು ಅಥವಾ ೨ ದಿನ ಕೋಳಿ ಮೊಟ್ಟೆಯ ಊಟ ಇತರ ದಿನಗಳಲ್ಲಿ ತರಕಾರಿ ಅನ್ನ - ಸಾಂಬಾರು ಊಟವನ್ನು ನೀಡುತ್ತಿದ್ದಾರೆ.

ತನ್ನ ಮನೆಯಲ್ಲಿ ಸಿದ್ಧಗೊಳಿಸಿದ ಆಹಾರ ಪದಾರ್ಥಗಳನ್ನು ಗರಗಂದೂರಿನ ಷಂಶುದ್ದೀನ್ (ಶಂಷು) ಎಂಬವರ ವಾಹನದಲ್ಲಿ ಅವರ ಸಹಕಾರದೊಂದಿಗೆ ನಿತ್ಯವೂ ಸುಂಟಿಕೊಪ್ಪಕ್ಕೆ ತಂದು ಅಗತ್ಯವಿರುವವರಿಗೆ ನೀಡುತ್ತಿದ್ದಾರೆ.

ಬಾಪುಟ್ಟಿಯವರು ಈ ಕೆಲಸವನ್ನು ತನ್ನ ಆತ್ಮತೃಪ್ತಿಗೆ ನೆರವೇರಿಸುತ್ತಿದ್ದು, ಯಾವುದೇ ಪ್ರಚಾರಕ್ಕಲ್ಲ. ಹಸಿದವರಿಗೆ ಒಂದು ಹೊತ್ತು ಅನ್ನ ನೀಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ಸಂತೃಪ್ತಿ ದೊರೆಯುತ್ತದೆ ಎಂದಿದ್ದಾರೆ.