ಪೊನ್ನಂಪೇಟೆ, ಜೂ. ೩: ತಾಲೂಕು ಕೇಂದ್ರ ವಾಗಿರುವ ಪೊನ್ನಂಪೇಟೆ ಯಲ್ಲಿ ಇದುವರೆಗೂ ಕೋವಿಡ್ ಲಸಿಕಾ ಕೇಂದ್ರವನ್ನು ತೆರೆಯಲಾಗಿಲ್ಲ. ಇದರಿಂದ ವಯಸ್ಕರು, ಹೆಂಗಸರು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಪೊನ್ನಂಪೇಟೆಯಲ್ಲಿ ಆದಷ್ಟು ಶೀಘ್ರವಾಗಿ ಕೋವಿಡ್ ಲಸಿಕಾ ಕೇಂದ್ರವನ್ನು ತೆರೆಯುವಂತೆ ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆ ಹಾಗೂ ಸುತ್ತಮುತ್ತಲಿನ ನಾಗರಿಕರು ಲಸಿಕೆಗಾಗಿ ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ಲಾಕ್‌ಡೌನ್ ಇರುವುದರಿಂದ ಬಸ್ ಹಾಗೂ ಆಟೋ ವ್ಯವಸ್ಥೆ ಇರುವುದಿಲ್ಲ. ಹೇಗಾದರೂ ಲಸಿಕಾ ಕೇಂದ್ರಕ್ಕೆ ಹೋದರೆ ಆ ಕೇಂದ್ರಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಲಸಿಕೆ ಲಭ್ಯತೆ ಇರುವುದರಿಂದ ಹೋದವರಿಗೆ ಲಸಿಕೆ ದೊರೆಯುತ್ತದೆ ಎಂಬ ಖಾತರಿಯೂ ಇಲ್ಲ. ಇದರಿಂದ ಬಡ ಜನರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಇದರಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಮ್ಮಿ ಅಣ್ಣಯ್ಯ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. -ಚನ್ನನಾಯಕ