ಸೋಮವಾರಪೇಟೆ, ಜೂ. ೨: ಸಮೀಪದ ಗೌಡಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳ ತಂಡ ಧಾಳಿ ನಡೆಸಿ, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದೆ.
ಗೌಡಳ್ಳಿ ಗ್ರಾಮ ನಿವಾಸಿ ಸುಬ್ರಮಣ್ಯ ಬಿನ್ ಸೋಮಯ್ಯ ಎಂಬವರ ಮನೆಯ ಮೇಲೆ ಅಬಕಾರಿ ಇಲಾಖಾಧಿಕಾರಿಗಳ ತಂಡ ಧಾಳಿ ನಡೆಸಿದ್ದು, ಈ ಸಂದರ್ಭ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ೨ ಲೀಟರ್ ಕಳ್ಳಭಟ್ಟಿ ಹಾಗೂ ಮನೆಯ ಹಿಂಭಾಗದಲ್ಲಿ ಶೇಖರಿಸಿಟ್ಟಿದ್ದ ೫೦ ಲೀಟರ್ ಪುಳಿಗಂಜಿಯನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಆರೋಪಿ ಸುಬ್ರಮಣ್ಯ ಅವರನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ. ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ವಿಭಾಗದ ಪ್ರಭಾರ ಅಬಕಾರಿ ಉಪ ಅಧೀಕ್ಷಕಿ ಆರ್.ಎಂ. ಚೈತ್ರ, ಅಬಕಾರಿ ನಿರೀಕ್ಷಕರಾದ ಸಂಪತ್ಕುಮಾರ್, ಸಿಬ್ಬಂದಿಗಳಾದ ಕೆ.ವಿ. ಸುಮತಿ, ವಿರೇಶ್ಕುಮಾರ್, ಹಿರೆಣ್ಣ ಮ್ಯಾಕೇರಿ, ಚಾಲಕ ಜಿತೇಂದ್ರ ಅವರುಗಳು ಭಾಗವಹಿಸಿದ್ದರು.