ಮಡಿಕೇರಿ, ಜೂ. ೩: ಕಳೆದ ಹಲವು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಲ್ಲೆಯ ಆದಿವಾಸಿ ಕುಟುಂಬಗಳು ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿವೆ.
ಅರಣ್ಯದಂಚಿನಲ್ಲಿ ವಾಸವಾಗಿರುವ ಆದಿವಾಸಿ ಕುಟುಂಬಗಳ ಬದುಕು ಅತಂತ್ರವಾಗಿದೆ. ಕೂಲಿ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಯಾವುದೇ ಯೋಜನೆಗಳನ್ನು ರೂಪಿಸದೆ ಹಲವು ಬೇಡಿಕೆಗಳನ್ನು ಈಡೇರಿಸದೆ ಎಲ್ಲಾ ರೀತಿಯಲ್ಲೂ ಕಡೆಗಣಿಸಲಾಗಿದ್ದು ಆಹಾರಕ್ಕೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆದಿವಾಸಿಗಳ ಅಭಿವೃದ್ಧಿಗೆಂದೇ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಇದ್ದು ಆದಿವಾಸಿಗಳ ಹಾಡಿಗೆ ಭೇಟಿ ನೀಡದೆ ಕಡೆಗಣಿಸಲಾಗುತ್ತಿದೆ. ಮಳೆಗಾಲ ಸಂದರ್ಭದಲ್ಲಿ ಪ್ರತಿವರ್ಷ ಗುಡಿಸಲುಗಳಿಗೆ ಟಾರ್ಪಾಲು ಇಲ್ಲದೆ ಗಾಳಿ ಮಳೆಗೆ ಮೈಯೊಡ್ಡಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಗುಡಿಸಲುಗಳಲ್ಲಿ ಮಕ್ಕಳು, ಬಾಣಂತಿಯರು, ವೃದ್ಧರು ಗುಡಿಸಲು ಮನೆಗಳಲ್ಲಿ ವಾಸವಾಗಿದ್ದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದಿಂದ ಆದಿವಾಸಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ನೀಡಬೇಕೆನ್ನುವ ಗುರಿಯಿದ್ದರೂ ವರ್ಷದಲ್ಲಿ ೬ ತಿಂಗಳು ಮಾತ್ರ ಸೀಮಿತ ಕುಟುಂಬಗಳಿಗೆ ವಿತರಣೆ ಮಾಡಲಾಗುತ್ತಿದೆ.
ಇದೀಗ ಕೋವಿಡ್ ಸಂಕಷ್ಟದಲ್ಲಿದ್ದರೂ ೩ತಿಂಗಳಿನಿAದ ಪೌಷ್ಟಿಕ ಆಹಾರ ಕಿಟ್ ತಲುಪಲೇ ಇಲ್ಲ ಎಂದು ಹಾಡಿಯ ನಿವಾಸಿಗಳು ಶಕ್ತಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಮಸೂದೆ ಕಾಯಿದೆ ಜಾರಿಯಾದ ಸಂದರ್ಭ ಕುಡಿಯುವ ನೀರು, ರಸ್ತೆ, ವಿದ್ಯುತ್, ಮನೆ, ಅಂಗನವಾಡಿ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂಬ ಆದೇಶವಿದ್ದರೂ ಜಿಲ್ಲೆಯ ಬಹುತೇಕ ಹಾಡಿಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ಕೆಲವು ಹಾಡಿಗಳಿಗೆ ಕಾಂಕ್ರಿಟ್ ರಸ್ತೆ ಮಾತ್ರ ಮಾಡಲಾಗಿದೆ. ಕೋವಿಡ್ನಿಂದ ಕೂಲಿ ಕೆಲಸವೂ ಇಲ್ಲದೆ, ತಿನ್ನಲು ಆಹಾರವೂ ಇಲ್ಲದೆ ಗೆಡ್ಡೆಗೆಣಸು ತಿನ್ನಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲಾ ಆದಿವಾಸಿ ಕುಟುಂಬಗಳಿಗೆ ಹನ್ನೆರಡು ತಿಂಗಳು ಪೌಷ್ಟಿಕ ಆಹಾರ ಕಿಟ್ಗಳನ್ನು ನೀಡುವ ಮೂಲಕ ಮೂಲಸೌಕರ್ಯ ಕಲ್ಪಿಸಬೇಕೆಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ವೈ.ಕೆ. ಗಣೇಶ್ ಹಾಗೂ ಜಿಲ್ಲಾ ಕಾರ್ಯದರ್ಶಿ ಪಿ.ಜೆ. ಅಶೋಕ್ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ, ವೀರಾಜಪೇಟೆ, ಪೊನ್ನಂಪೇಟೆ, ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಲವೆಡೆ ಆದಿವಾಸಿ ಹಾಡಿಗಳಿವೆ.
ಇಂದು ಬಹುತೇಕ ಹಾಡಿಗಳು ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ ಪೊನ್ನಂಪೇಟೆ ತಾಲೂಕಿನ ನಾಣಚ್ಚಿ, ಗದ್ದೆಹಳ್ಳ, ತಟ್ಟಳ್ಳಿ, ಬಸವನಹಳ್ಳಿ, ಚೊಟ್ಟೆಪಾರೆ, ಚಿಕ್ಕ ರೇಷ್ಮೆ,ಮಜ್ಜಿಗೆ ಹಳ್ಳ ಸೇರಿದಂತೆ ಬಹುತೇಕ ಹಾಡುಗಳು ಯಾವುದೇ ಮೂಲ ಸೌಕರ್ಯವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.