ಸೋಮವಾರಪೇಟೆ,ಜೂ.೩: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ಕೃಷಿಕರು ನೆಮ್ಮದಿ ಕಳೆದುಕೊಂಡಿದ್ದು, ಕೃಷಿ ಫಸಲಿನ ನಷ್ಟ ಅನುಭವಿಸುತ್ತಿದ್ದಾರೆ.
೪ ರಿಂದ ೫ ಕಾಡಾನೆಗಳಿರುವ ಹಿಂಡು ಗ್ರಾಮ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದು, ಕಾಫಿ ತೋಟ, ಗದ್ದೆಗಳಲ್ಲಿ ಸಂಚರಿಸಿ ಫಸಲು ನಷ್ಟಪಡಿಸುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದು, ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಇಲಾಖೆ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.
ನಿನ್ನೆ ರಾತ್ರಿ ಕೂತಿ ಗ್ರಾಮದ ಕೆ.ಡಿ. ಗಿರೀಶ್ ಅವರಿಗೆ ಸೇರಿದ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳು, ನೂರಾರು ಕಾಫಿ ಗಿಡಗಳನ್ನು ಧ್ವಂಸ ಮಾಡಿವೆ. ಇದರೊಂದಿಗೆ ತೋಟದಲ್ಲಿದ್ದ ಬಾಳೆ ಫಸಲನ್ನು ತಿಂದು ನಾಶಗೊಳಿಸಿವೆ.
ಇದರೊಂದಿಗೆ ಅಕ್ಕಪಕ್ಕದ ಕಾಫಿ ತೋಟ, ಗದ್ದೆಗಳಲ್ಲೂ ದಾಂಧಲೆ ನಡೆಸುತ್ತಿದ್ದು, ಕೃಷಿಕರು ಗದ್ದೆ, ತೋಟಗಳಲ್ಲಿ ಕೆಲಸ ನಿರ್ವಹಿಸಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಕಾಡಾನೆಗಳ ಹಿಂಡು ಕೂತಿ ಸೇರಿದಂತೆ ನಗರಳ್ಳಿ ವ್ಯಾಪ್ತಿಯಲ್ಲೂ ಸಂಚರಿಸುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲೂ ಸಹ ಭಯಪಡುವಂತಾಗಿದೆ. ತಕ್ಷಣ ಅರಣ್ಯ ಇಲಾಖಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ, ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.