ಮಡಿಕೇರಿ, ಮೇ ೩೧: ಪ್ರಸಕ್ತ ವರ್ಷದ ಮುಂಗಾರು ಮಳೆ ಕೊಡಗಿನಲ್ಲಿ ಆರಂಭವಾಗಲು, ಇನ್ನೇನು ಕ್ಷಣಗಣನೆ ಶುರುವಾಗಿದೆ. ಈ ಬಾರಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಸಹಜ ರೀತಿಯಲ್ಲಿ ವಾಡಿಕೆಯಂತೆ ಮಳೆಗಾಲ ಕಂಡು ಬರುವ ನಿರೀಕ್ಷೆ ಇರುವದಾಗಿ ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯನ್ನು ಆಧರಿಸಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ವಿವರ ತಿಳಿಸಿದೆ. ಕೇರಳದಲ್ಲಿ ಈಗಾಗಲೇ ಮುಂಗಾರು ಅಡಿಯಿಡುವ ಕುರಿತು ವಾತಾವರಣ ಬದಲಾಗುತ್ತಿದ್ದು, ಈಗಾಗಲೇ ಇದಕ್ಕೆ ಪೂರಕವಾದ ಸನ್ನಿವೇಶ ಕಂಡು ಬಂದಿದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಒಂದೆರಡು ದಿನಗಳ ಬಳಿಕ ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಪ್ರಾರಂಭಗೊಳ್ಳಲಿದೆ.ಜೂನ್ ಆರಂಭದಿAದ ಬಹುತೇಕ ಮೂರು ತಿಂಗಳು ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಗಾಲ ಕಂಡುಬರುತ್ತಿತ್ತು. ಆದರೆ, ೨೦೧೮ ರಿಂದ ೨೦೨೦ರವರೆಗೆ ಮೂರು ವರ್ಷಗಳಲ್ಲೂ ಜೂನ್, ಜುಲೈ ತಿಂಗಳಿನಲ್ಲಿ ಹೆಚ್ಚಿನ ಮಳೆ ಸುರಿಯದೆ ಈ ಅವಧಿಯಲ್ಲಿ ಬಹುತೇಕ ಬಿಸಿಲಿನ ವಾತಾವರಣವೇ ಕಂಡು ಬಂದಿದ್ದನ್ನು ಸ್ಮರಿಸಬಹುದು. ಆದರೆ ಪ್ರಸಕ್ತ ವರ್ಷ ಈ ಹಿಂದಿನ ವರ್ಷಗಳಂತೆ ಸಹಜ ರೀತಿಯಲ್ಲಿ ವಾಡಿಕೆಯಂತೆ ಮಳೆಗಾಲ ಮುಂದುವರಿಯುವ ಸಾಧ್ಯತೆಯ ಕುರಿತಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ
ಜೂನ್ ತಿಂಗಳಿನಲ್ಲಿ ಕೇವಲ ಶೇ. ೫ ರಷ್ಟು ಮಾತ್ರ ಮಳೆಯಾಗಿತ್ತು. ಜುಲೈ ತಿಂಗಳಿನಲ್ಲಿಯೂ ಅಷ್ಟಾಗಿ ಬಿರುಸುಕಾಣದ ಮಳೆ ನಂತರದಲ್ಲಿ ಆಗಸ್ಟ್ ತಿಂಗಳಿನಲ್ಲಿ ತನ್ನ ಪ್ರತಾಪ ತೋರುವದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಪಾರ ಹಾನಿಯನ್ನು ಸೃಷ್ಟಿಸಿತ್ತು. ೨೦೨೧ರ ಮಳೆಗಾಲ ಬಹುಶಃ ಇಂತಹ ದುರಂತವನ್ನು ಸೃಷ್ಟಿಸಲಾರದು, ಜೂನ್ ಮೊದಲ ವಾರದಿಂದಲೇ ಕೊಡಗಿನಲ್ಲಿ ವಾಡಿಕೆಯಂತೆ ಮಳೆಗಾಲ ಮುಂದುವರಿಯುವ ನಿರೀಕ್ಷೆ ಇರುವದಾಗಿ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿ ತಿಳಿಸಿದೆ.
ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದಲೇ ವಾತಾವರಣದ ಅಸಹಜತೆಯ ಪರಿಣಾಮ, ಹಲವೆಡೆ, ವಾಯುಭಾರ ಕುಸಿತ, ಚಂಡಮಾರುತದ ಹಿನ್ನೆಲೆಯಲ್ಲಿ ಈ ತನಕವೂ ಮಳೆಯ ಸನ್ನಿವೇಶ ಎದುರಾಗಿದೆ.
(ಮೊದಲ ಪುಟದಿಂದ) ಮೇ ತಿಂಗಳಿನಲ್ಲಿ ಉಂಟಾದ ತೌಕ್ತೆ ಹಾಗೂ ಯಾಸ್ ಚಂಡಮಾರುತದ ಕಾರಣದಿಂದಾಗಿ ಬಹುತೇಕ ಮೇ ತಿಂಗಳಿಡೀ ಕೊಡಗಿನಲ್ಲಿ ಹೆಚ್ಚು ಮಳೆಯಾಗಿದೆ. ಈಗಲೂ ಮಳೆಗಾಲದ ರೀತಿಯಲ್ಲೇ ಆಗಾಗ್ಗೆ ಮಳೆಯಾಗುತ್ತಿದೆ. ಈ ವಾತಾವರಣ ಇದರಂತೆಯೇ ಮುಂದುವರಿಯುವ ಸಾಧ್ಯತೆ ಇದ್ದು, ಇದು ಮುಂಗಾರು ಮಳೆಯೊಂದಿಗೂ ಸೇರಿ ಮುಂದಿನ ಒಂದೆರಡು ದಿನಗಳಿಂದಲೇ ಜಿಲ್ಲೆಯಲ್ಲಿ ಮುಂಗಾರು ಮಳೆಯ ಪರಿಸ್ಥಿತಿ ಎದುರಾಗುವ ನಿರೀಕ್ಷೆ ಇದೆ.
ಪ್ರಸ್ತುತ ಶೇ. ೭೦ ರಷ್ಟು ಮೋಡ ಕವಿದ ವಾತಾವರಣವೇ ಗೋಚರಿಸುತ್ತಿದೆ. ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಈಗಾಗಲೇ ತನ್ನ ಸಿದ್ಧತೆಯನ್ನು ಪ್ರಾರಂಭಿಸಿದ್ದು, ಹಲವು ಸಭೆಗಳನ್ನು ನಡೆಸಿದೆ. ಕಳೆದೆರಡು ವರ್ಷಗಳಂತೆ ಎನ್ಡಿಆರ್ಎಫ್ (ಪ್ರಾಕೃತಿಕ ವಿಪತ್ತು ನಿರ್ವಹಣಾ ತಂಡ)ನ ಸಿಬ್ಬಂದಿಗಳು ಕೂಡ ಈಗಾಗಲೇ ಜಿಲ್ಲೆಗೆ ಆಗಮಿಸಿದ್ದಾರೆ.