*ಗೋಣಿಕೊಪ್ಪ, ಜೂ. ೧: ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೪೮ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಪಂಚಾಯಿತಿಯ ಜವಾಬ್ದಾರಿಯುತ ನಿರ್ವಹಣೆಯಿಂದ ೪೩ ಪ್ರಕರಣಗಳಲ್ಲಿ ಶೀಘ್ರವಾಗಿ ಗುಣಮುಖರಾಗಿರುವುದು ಈ ಭಾಗದ ಕೊರೊನಾ ಮುಂಚೂಣಿ ಕಾರ್ಯಕರ್ತರ ಸೇವೆಯ ಪ್ರತಿಫಲ ಎಂದು ಶಾಸಕ ಕೆ.ಜಿ. ಬೋಪಯ್ಯ ಶ್ಲಾಘಿಸಿದರು.
ಪೊನ್ನಪ್ಪಸಂತೆ ಸಮುದಾಯ ಭವನದಲ್ಲಿ ನಡೆದ ಕೋವಿಡ್ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವ ಮೂಲಕ ಕೋವಿಡ್ ಬಾಧೆಯಿಂದ ಮುಕ್ತರಾಗಬೇಕಾಗಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ೯೪ ಜನ ಲಸಿಕೆ ಪಡೆದುಕೊಂಡಿದ್ದಾರೆ. ೧೩೫೦ ಜನ ೧೮ ರಿಂದ ೪೫ ವರ್ಷದವರು ಲಸಿಕೆ ಪಡೆದುಕೊಳ್ಳಬೇಕಾಗಿದೆ. ಉಳಿದವರು ಕೂಡ ಲಸಿಕೆ ಪಡೆಯಲು ಮುಂಚೂಣಿ ಕಾರ್ಯಕರ್ತರು ಮನವೊಲಿಸಬೇಕಿದೆ ಎಂದರು.
ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗನಂದಾ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ, ಜಿಲ್ಲಾ ಉಪ ಕಾರ್ಯ ನಿರ್ವಾಹಕಾಧಿಕಾರಿ ಪುಷ್ಪಾವತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಸಮಾಜ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ವೃತ್ತ ನಿರೀಕ್ಷಕ ಜಯರಾಮ್, ಬಗರ್ಹುಕಂ ಜಾಗೃತಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿಯಕ್ಪೂವಂಡ ಪ್ರಭಾ, ಗ್ರಾ.ಪಂ. ಸದಸ್ಯ ಆದೇಂಗಡ ವಿನುಚಂಗಪ್ಪ, ಪಿ.ಡಿ.ಓ ಸತೀಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಹಾಗೂ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.