ಸಿದ್ದಾಪುರ, ಜೂ. ೧: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಾ. ೭ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದು, ಕೊಡಗು ಜಿಲ್ಲೆಯಲ್ಲಿ ತಾ. ೭ರ ಮುಂಚಿತ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರು ಪಣತೊಡಬೇಕು. ಜನರು ಎಚ್ಚರ ವಹಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಲಾಕ್‌ಡೌನ್ ಅನ್ನು ಮುಂದುವರಿಸಿದ್ದು, ತಾ. ೭ರೊಳಗೆ ಜಿಲ್ಲೆಯಲ್ಲಿ ಕೊರೊನಾ ಮುಕ್ತ ಮಾಡಲು ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ನ ಸಮಿತಿಯವರು ಹಾಗೂ ಗ್ರಾಮಸ್ಥರು ಶ್ರಮಿಸಬೇಕೆಂದರು.

ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬAದಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕೆಂದರು. ಲಸಿಕೆಯ ಬಗ್ಗೆ ಸುಳ್ಳು ವದಂತಿಯನ್ನು ನಂಬದೇ ಎಲ್ಲರೂ ಲಸಿಕೆ ಪಡೆದಲ್ಲಿ ರೋಗವನ್ನು ತಡೆಗಟ್ಟಲು ಅನುಕೂಲವಾಗುತ್ತದೆ ಎಂದು ರಂಜನ್ ಮಾಹಿತಿ ನೀಡಿದರು.

ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಂಚಾಯಿತಿಯ ವ್ಯಾಪ್ತಿಯ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯನ್ನು ವಾರದ ಎರಡು ದಿನ ಮಾಡಿ ಮುಂಜಾಗ್ರತಾ ಕ್ರಮಕೈಗೊಂಡು ವೈರಸ್ ಅನ್ನು ತಡೆಗಟ್ಟಬೇಕೆಂದು ಪಂಚಾಯಿತಿ ಪಿಡಿಓ ಅನಿಲ್ ಕುಮಾರ್‌ಗೆ ಸೂಚನೆ ನೀಡಿದರು.

ಗ್ರಾಮಸ್ಥರು ಮನೆಯಿಂದ ಹೊರಗಡೆ ಬರುವ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು. ನಂತರ ಮನೆಗೆ ಹೋಗಿ ಸ್ನಾನ ಮಾಡಿ ಒಳಕ್ಕೆ ಪ್ರವೇಶ ಮಾಡಬೇಕೆಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಪ್ರವಾಹ ಬರುವ ಸಂದರ್ಭದಲ್ಲಿ ಕೂಡ ಟಾಸ್ಕ್ ಫೋರ್ಸ್ ಸಮಿತಿಯು ಸಹಕಾರ ನೀಡಬೇಕೆಂದರು. ಪ್ರವಾಹದ ಭೀತಿಯನ್ನು ಎದುರಿಸಲು ಈಗಾಗಲೇ ಶಾಸಕರ ನೇತೃತ್ವದಲ್ಲಿ ಎಲ್ಲರೂ ಸಿದ್ಧರಾಗಿದ್ದೇವೆ. ಆದರೂ ಕೂಡ ಕೋವಿಡ್-೧೯ ರಿಂದ ಭಯದಲ್ಲೇ ದಿನದೂಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ಚೇತನ್ ಮಾಹಿತಿ ನೀಡಿದರು.

ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಎ.ಕೆ. ಹಕೀಂ, ವೈರಸ್ ಪತ್ತೆಯಾದ ಕೆಲವರು ಅನಗತ್ಯವಾಗಿ ಓಡಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಹ ವ್ಯಕ್ತಿಗಳು ಆಶ್ರಯ ಪಡೆಯಲು ಹೋಂಕೇರ್ ಸೆಂಟರ್ ಆಗಿ ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣವನ್ನು ಬಳಸಲು ಅನುಮತಿ ನೀಡಬೇಕೆಂದು ಶಾಸಕರಿಗೆ ಹಾಗೂ ತಹಶೀಲ್ದಾರ್‌ಗೆ ಶಾದಿ ಮಹಲ್ ಕಾರ್ಯದರ್ಶಿ ಎ.ಕೆ. ಅಬ್ದುಲ್ ಮುಖಾಂತರ ಮನವಿ ಪತ್ರ ನೀಡಿ ೧೦ ಹಾಸಿಗೆಗೆ ಅವಕಾಶ ನೀಡಲು ಕೋರಿದರು.

ಸಭೆಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್, ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಶ್, ಉಪಾಧ್ಯಕ್ಷೆ ಧಮಯಂತಿ, ಪಿಡಿಓ ಅನಿಲ್ ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಪಿ.ಸಿ. ಅಚ್ಚಯ್ಯ ಹಾಗೂ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಗ್ರಾಮ ಲೆಕ್ಕಿಗ ಸಚಿನ್ ಹಾಜರಿದ್ದರು.