ಇಂದು ವಿಶ್ವ ಕ್ಷೀರ ದಿನ. ಗೋವುಗಳು ಎನ್ನುವ ಪದ ಕೇಳಿದಾಗ ಹೇಗೆ ನಮ್ಮ-ನಿಮ್ಮೆಲ್ಲರ ಮನಸಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಗಂಗೆ, ಗೌರಿ, ಸೀತೆ, ಸಾವಿತ್ರಿ, ಗಣೇಶ, ರಾಮ ಹಸು, ಕರು, ಎಮ್ಮೆ, ಎತ್ತುಗಳು ಮನದಲ್ಲಿ ಬಂದು ಹೋಗುತ್ತವೆ. ಅಂದೆಲ್ಲಾ ಕೆಲವರ ಮನೆಯ ಒಳಗೆ ಕೊಟ್ಟಿಗೆಯಿದ್ದರೆ ಕೆಲವರಿಗೆ ಮನೆಗೆ ಅಂಟಿಕೊAಡAತೆ ಕೊಟ್ಟಿಗೆಯಿರುತ್ತಿದ್ದವು. ಗೋವುಗಳು ಉಸಿರಾಡುವ ಸದ್ದು, ಮೇವು ಮೆಲುಕು ಹಾಕುವ ಶಬ್ಧ, ಪುಟಾಣಿ ಅಂಬೆಗರು ಹಾಲಿಗಾಗಿ ಅಂಬೋ ಎಂದು ಕೂಗುವ ಕೂಗು, ಮನೆಯೊಳಗಿದ್ದವರಿಗೆ ಸ್ಪಷ್ಟವಾಗಿ ಕೇಳಿಸುವಷ್ಟು ಹೃದಯಕ್ಕೆ ಹತ್ತಿರದಲ್ಲಿರುತ್ತಿದ್ದವು ಗೋವುಗಳು.
ಅಂದು ಹೆಚ್ಚಿನ ಮನೆಗಳ ಕೆಲಸ ಆರಂಭವಾಗುತ್ತಿದ್ದಿದ್ದೆ ಕೊಟ್ಟಿಗೆಯಿಂದ, ಬೆಳಿಗ್ಗೆ ನಾಲ್ಕಕ್ಕೆ ದನದ ಕೊಟ್ಟಿಗೆ ಶುಚಿ ಮಾಡುವುದು, ಮನೆಯೊಡತಿ ತಂಬಿಗೆಯ ತುಂಬಾ ನೊರೆ ಹಾಲು ಕರೆಯುವುದು, ಹಸು ಹಾಲು ಕೊಟ್ಟರೆ ಅದರೆಡೆಗೆ ಅಕ್ಕರೆಯ ನೋಟ, ಹಾಲು ಕಡಿಮೆಯಾದರೆ ಕರು ಕುಡಿದು ಬಿಟ್ಟೀತಾ? ಹಸುಗೆ ಮೇವು ಸಾಲುತ್ತಿಲ್ಲವಾ? ಎಂಬ ಚಿಂತೆ, ಹಾಲು ಕೊಡುವ ಹಸುವಿಗೆ ವಿಶೇಷ ಆರೈಕೆ. ಬಳಿಕ ಹಾಲು ಕಾಯಿಸುವಾಗ ಸಣ್ಣ ಬೆಂಕಿಯಲ್ಲಿ ಕೆನೆ ಬರುವವರೆಗೂ ತಪಸ್ಸಿನ ಮಾದರಿ ಹಾಲು ಕಾಯಿಸಿ , ಕಳ್ಳ ಬೆಕ್ಕಿಗೆ ಆಹಾರವಾಗದಂತೆ ಹಾಲನ್ನು ಸುರಕ್ಷಿತ ಜಾಗದಲ್ಲಿ ಎತ್ತಿಡುವ ದೊಡ್ಡ ಜವಾಬ್ದಾರಿ ಪ್ರತಿ ಮನೆಯಲ್ಲಿ ಅಮ್ಮಂದಿರಿಗೆ ಇರುತ್ತಿತ್ತು. ಇನ್ನೂ ಹಾಲು ಕೊಡುವ ಹಸು ಎಲ್ಲಿ ತಾಯಿಯ ಜೊತೆಯಲ್ಲೇ ಸಾಗಿ ಹಾಲನ್ನೆಲ್ಲಾ ಕುಡಿದು ಖಾಲಿ ಮಾಡುತ್ತದೆಯೋ ಎನ್ನುವ ಭಯದಲ್ಲಿ ಕರುವಿನ ಬಾಯಿಗೆ ಬಿದಿರಿನ ಇಲ್ಲವೇ ಬೆತ್ತದ ಮೂಕರಿಕೆ ಕಟ್ಟಿ ಕಳಿಸುತ್ತಾ ಇದ್ದಿದ್ದು, ಆ ಪುಟಾಣಿ ಕರುವಿನ ಕೊರಳಿಗೆ ಒಂದು ಜಣ-ಜಣ ಸದ್ದು ಮಾಡುವ ಘಂಟೆ ಬೇರೆ.
ಇಷ್ಟಕ್ಕೆ ಹಾಲು ಕೊಡುವ ಹಸುವಿನ ಪೋಷಣೆ ಮುಗಿದಿದ್ದರೇ ಪರ್ವಾಗಿಲ್ಲ. ಇಡೀ ದಿನ ಅದಕ್ಕಾಗಿ ಹಸಿರುಹುಲ್ಲು ಕತ್ತರಿಸಿ ತಂದು ಇಡುವುದು, ಅದು ಮಲಗುವ ಜಾಗಕ್ಕೆ ಬೂದಿ ಹಾಕಿ ಬೆಚ್ಚಗೆ ಇಡುವುದು, ಇಡೀ ದಿನ ಮನೆಯಲ್ಲೇ ಸಾಂಬಾರಿಗಾಗಿ ಕೊಯ್ದ ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ ಹಸುವಿನ ಗಂಜಿಗೆ ಹಾಕಿ ಕಾಯ್ದಿರಿಸುವುದು ಇದೆಲ್ಲವೂ ಅಂದಿನ ದಿನಗಳಲ್ಲಿ ಜಾನುವಾರುಗಳಿದ್ದ ಮನೆಯಲ್ಲಿನ ಸಾಮಾನ್ಯ ಚಿತ್ರಣಗಳಾಗಿದ್ದವು.
ಆದರಿಂದು ಹಾಲು ಎನ್ನುವುದು ಇಷ್ಟೊಂದು ಶ್ರಮದ ಜೊತೆಗೆ ಸಿಗುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಪ್ರಕೃತಿಗೆ ಹಾನಿಕಾರಕವಾದ ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಆಗಿ ಮನೆಬಾಗಿಲಿಗೆ ಬಂದು ಬೀಳುತ್ತದೆ. ನಾವೂ ಓದಿದರು, ಓದದಿದ್ದರೂ ಆ ಹಾಲಿನೊಳಗೆ ಎಷ್ಟು ಪ್ರಮಾಣದ ಕೊಬ್ಬಿದೆ, ಕೊಬ್ಬಿಲ್ವಾ? ಪೋಷಕಾಂಶ ಯಾವುದಿದೆ ಎಂದೆಲ್ಲಾ ಮುದ್ರಣ ಮಾಡಿರುತ್ತಾರೆ. ಇದು ಕೊಟ್ಟಿಗೆ, ಅಮ್ಮ - ಅಪ್ಪನ ಶ್ರಮ ಯಾವುದರ ಅರಿವಿಲ್ಲದೆ ಇಂದು ಹಾಲು, ಹೈನುಗಾರಿಕೆಯಿಂದ ನೇರವಾಗಿ ಗ್ರಾಹಕರ ಕೈಗೆ ಬಂದು ತಲುಪುತ್ತಿದೆ.
ಆದರೆ ತಂಬಿಗೆಯಲ್ಲಿ ಕರೆವ, ಮನೆಯ ಹಾಲಿನ ರುಚಿಕಂಡ ಅದೆಷ್ಟೋ ಮಂದಿ ನಗರವಾಸಿಗಳು ಇಂದಿಗೂ ಪಕ್ಕದ ಹಳ್ಳಿಯವರಿಂದ ಹಸು ಸಾಕಿದವರ ಬಳಿಯೇ ಹಾಲು ತೆಗೆದುಕೊಳ್ಳುವ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ.
ಇನ್ನೂ ಹಲವರಿಗೆ ಹಾಲೆಂದರೆ ಅಲರ್ಜಿ, ಹಾಲು ಸೇರಿದಂತೆ ಹಾಲಿನ ಯಾವ ಉತ್ಪನ್ನಗಳು, ಖಾಧ್ಯಗಳು ಕೆಲವರಿಗೆ ಹಿಡಿಸುವುದೇ ಇಲ್ಲ. ಮತ್ತೂ ಕೆಲವರು ಇರುತ್ತಾರೆ, ಬೆಣ್ಣೆ, ತುಪ್ಪ, ಹಾಲು, ಮೊಸರು ಇಲ್ಲದೇ ಅವರ ಜೀವನದ ಕಲ್ಪನೆ ಕೂಡಾ ಅಸಾಧ್ಯ ಎನ್ನುವವರು.ಹಾಲು ಮುಖ್ಯವಾಗಿ ಬರೇ ಕುಡಿಯುವದಕ್ಕಷ್ಟೇ ಮುಖ್ಯವಲ್ಲ. ಹಾಲು ಪೂಜ್ಯ ಸ್ಥಾನ ಕೂಡಾ ಕಂಡಿದೆ
ಇನ್ನೂ ಗೋವು ಕಾಮಧೇನು ಆದ್ದರಿಂದ ಅದರಿಂದ ಸಿಗುವ ಹಾಲು ಅಮೃತದಂತೆಯೇ, ಹಾಲಿನಿಂದ, ಮೊಸರು, ಮೊಸರಿನಿಂದ ಮಜ್ಜಿಗೆ ಮತ್ತು ಬೆಣ್ಣೆ. ಇವೆಲ್ಲವೂ ಕೂಡಾ ಅತ್ಯಂತ ಪೌಷ್ಠಿಕಾಂಶಗಳುಳ್ಳ ಆಹಾರಗಳೇ. ಪ್ರತಿಯೊಬ್ಬರ ಜೀವನದಲ್ಲಿಯೂ ಈ ಆಹಾರಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ ಎನ್ನುವ ವಿಚಾರ ನಾವೂ ಅವುಗಳ ಬಗ್ಗೆ ಯೋಚಿಸಿದರೆ ತಿಳಿಯುತ್ತದೆ.
ಕಾಲಕ್ಕೆ ತಕ್ಕಂತೆ ಹಾಲು ಕೂಡಾ ನಾನಾ ರೂಪಾಂತರಗಳನ್ನು ಹೊಂದಿದೆ. ವಿದೇಶಗಳಲ್ಲಿ ಗಾಜಿನ ಬಾಟಲಿಗಳಲ್ಲಿ ಹಾಲು ಮಾರಾಟ ಮಾಡಿದರೆ ನಮ್ಮಲ್ಲಿ ಇನ್ನೂ ಪ್ಲಾಸ್ಟಿಕ್ ಕವರ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೊಬ್ಬಿರುವ, ಕೊಬ್ಬೇ ಇಲ್ಲದ, ಹೀಗೆ ನಾನಾಬಗೆಯ ಹಾಲಿನ ಪ್ಯಾಕ್ಗಳು ಸಿಗುತ್ತವೆ. ತಿಂಗಳುಗಟ್ಟಲೇ ಸಂರಕ್ಷಿಸಿಡಬಹುದಾದ ಟೆಟ್ರಾ ಪ್ಯಾಕ್ ಹಾಲು ಕೂಡಾ ಸಿಗುತ್ತಿದೆ. ಏನೆ ಹೊಸತಾಗಿ ಬಂದರೂ ಇಂದಿಗೂ ಜನರಿಗೆ ಹಸುವಿನಿಂದ ನೇರವಾಗಿ ಸಿಗುವ ಹಾಲು, ಮೊಸರು, ಬೆಣ್ಣೆಯ ಆ ರುಚಿ ಮಾಸಿಲ್ಲ.
ಈಗಂತೂ ಕೊರೊನಾ ಎನ್ನುವ ಹೊಸಬಗೆಯ ರೋಗ ದೇಶದೊಳಗೆ ಕಾಲಿಟ್ಟಾಗಿನಿಂದ ಆಯುಷ್ ಇಲಾಖೆ ಹೇಳುತ್ತಿರುವುದು ಒಂದೇ ಮಾತು. ಎಲ್ಲರೂ ಗೋಲ್ಡನ್ ಮಿಲ್ಕ್ ಕುಡಿಯಿರಿ ಎಂದು. ಅಂದರೆ ಅರಿಶಿನ ಹಾಕಿದ ಹಾಲು ಕುಡಿದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು. ಈ ನಿಟ್ಟಿನಲ್ಲಿ ಆ ಹಾಲು ಶ್ರೇಷ್ಠ ಈ ಹಾಲೂ ಶ್ರೇಷ್ಠ ಎಂದು ಹಲವು ಜನರು ಹಳ್ಳಿಗಳ ಕಡೆ ಮಕ್ಕಳಿಗೆ ಕತ್ತೇ ಹಾಲು ಕುಡಿಸುವುದು ನೀವೂ ಕೇಳಿರಬಹುದು. ಹರಿಯಾಣದ ಹಿಸ್ಸಾರದಲ್ಲಿ ಈಗಾಗಲೇ ಒಂದು ಕತ್ತೆ ಹಾಲಿನ ಡೈರಿ ಕೂಡಾ ಆರಂಭವಾಗಿದೆಯAತೆ. ಕತ್ತೆ ಹಾಲೂ ಸೌಂದರ್ಯವರ್ಧಕ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಜನರು ಮುಗಿಬಿದ್ದು ಕುಡಿಯುವುದು ಕಂಡಿರುತ್ತೀರ. ಇನ್ನೂ ಹಾಲು ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತಿದೆ.
ತೀರಾ ಜಗತ್ತು ಇಂದು ಹಳ್ಳಿಮನೆಯ ಕೊಟ್ಟಿಗೆಯಿಂದ ಸೂಪರ್ ಮಾರ್ಕೆಟ್ ಅಂಚಿಗೆ ಬಂದು ನಿಂತಿದೆ. ಇಂದು ನಮಗೆ ನಮ್ಮ ಪಕ್ಕದ ಹಳ್ಳಿಯ ರಾಮಣ್ಣನ ಮನೆಯ ಹಸುವಿನ ಹಾಲು ಸಿಗುತ್ತದೆಯೋ ಇಲ್ಲವೋ ಆದರೆ ಡೆನ್ಮಾರ್ಕಿನ, ನ್ಯೂಜಿಲ್ಯಾಂಡಿನ ಹಾಲು ಸಿಗುವ ಕಾಲಘಟ್ಟದಲ್ಲಿ ಇದ್ದೇವೆ. ಮಾರುಕಟ್ಟೆಯಲ್ಲಿ ವಿವಿಧ ಫ್ಲೇವರಿನ ಹಾಲು, ಮೊಸರು, ಹಲ್ವಾದಂತೆ ಗಟ್ಟಿಯಾದ ಮೊಸರು ಲಭ್ಯವಾಗುತ್ತಿದೆ. ಈ ಹೊತ್ತಲ್ಲಿ ನಾವೂ ದೇಸಿ- ಸ್ವದೇಶಿ ಎಂದು ಏನೇ ಜನರ ಮುಂದೆ ಜಾಗಟೆ ಬಾರಿಸಿದರು ಕೂಡಾ ಅವರು ನಂಬಿರುವ, ನಾಲಿಗೆಗೆ ಹತ್ತಿರುವ ಯಾವುದೋ ಬ್ರ್ಯಾಂಡಿನ ಹಾಲಿನ ರುಚಿ ಅದೆಲ್ಲವನ್ನು ಮರೆಸಿ ಹಾಕುತ್ತಿದೆ.
ವಿಶ್ವ ಕ್ಷೀರದಿನ ಅಂಥ ಜೂನ್ ೧ ಅನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವೇ ಹಾಲಿನ ಮಹತ್ವ ತಿಳಿಸುವುದು. ಈಗಲಾದರೂ ಕಾಡಿನ ಸೊಪ್ಪುಸೆದೆ, ಒಣಹುಲ್ಲು ಇಂಥವನ್ನು ತಿಂದು ಪೌಷ್ಟಿಕಾಂಶಭರಿತ ಹಾಲು ನೀಡುವ ದೇಸಿ ಹಸುಗಳ ಸಾಕಾಣಿಕೆ ಹೆಚ್ಚಾಗಬೇಕು. ಗೋವುಗಳನ್ನು ನಮ್ಮ ಬದುಕಿನ ಭಾಗ ಮಾಡಿಕೊಂಡರೆ ಪ್ರತಿ ಮನೆಯಲ್ಲಿ ಗೋವು ಸಾಕಾಣಿಕೆ ಪ್ರಾರಂಭವಾದರೆ ಒಂದು ಮನೆಗೆ ಅಗತ್ಯವಿರುವ ಬೆಣ್ಣೆ, ಮೊಸರು, ಹಾಲು, ಎಲ್ಲವೂ ಪರಿಶುದ್ಧವಾಗಿ ಮನೆಯಲ್ಲೇ ಸಿಗುತ್ತದೆ. ಬರೇ ಆರ್ಥಿಕ ಲಾಭಕ್ಕಾಗಿ ಹೆಚ್ಚುವರಿ ಆಹಾರ , ಹಾರ್ಮೋನ್ ಕೊಟ್ಟು ಸಾಕುವ ಹಸುವಿಗಿಂತ ಸಹಜವಾಗಿ, ಸಹಜ ಆಹಾರ ಪದ್ಧತಿಯ ಹಸು ಸಾಕಾಣಿಕೆ ಇಂದು ಪ್ರತಿ ಮನೆಯ ಅಗತ್ಯ. ಅಚ್ಚ ಮಲೆನಾಡದ ಕೊಡಗಿನಲ್ಲಂತೂ ಇದಕ್ಕೆ ಹೇರಳವಾದ ಅವಕಾಶಗಳಿವೆ. ಅಂತೆಯೇ ಕಾಡುಪ್ರಾಣಿಗಳ ಅಪಾಯವೂ ಇದೆ. ಇವೆಲ್ಲವನ್ನು ಸರಿದೂಗಿಸಿಕೊಂಡು ಈ ಗೋವು ಸಂಸ್ಕೃತಿಯನ್ನು ಮುಂದುವರಿಸಿದ್ದೇ ಆದಲ್ಲಿ ಹಾಲಿನೊಂದಿಗೆ ಹಾಲಿನಂಥ ಜೀವನವನ್ನು ನಾವೂ ಮಾಡಬಹುದು ಎಂದೇ ಅನಿಸುತ್ತದೆ. ಬರಹ: ಉಷಾಪ್ರೀತಮ್