ಕುಶಾಲನಗರ, ಜೂ. ೧: ೧೮ ರಿಂದ ೪೪ ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂಬ ಮಾಹಿತಿ ಆಧರಿಸಿ ನೂರಾರು ಮಂದಿ ಸಾರ್ವಜನಿಕರು ರೈತ ಸಹಕಾರ ಭವನದ ಲಸಿಕಾ ಕೇಂದ್ರದ ಬಳಿ ಸೋಮವಾರ ಸೇರಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ೧೮ ರಿಂದ ೪೪ ವರ್ಷ ಪ್ರಾಯದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡಿದ ಸಂದೇಶವನ್ನು ಗಮನಿಸಿ ಹಲವಾರು ಮಂದಿ ಯುವಕ ಯುವತಿಯರು ಲಸಿಕೆ ಕೇಂದ್ರಕ್ಕೆ ಆಗಮಿಸಿ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭ ಆರೋಗ್ಯ ಇಲಾಖೆಯವರು ಕೇವಲ ಕೊರೊನ ಮಂಚೂಣಿಯಲ್ಲಿರುವ ಫಲಾನುಭವಿಗಳಿಗೆ ಮಾತ್ರ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ಉಂಟಾದ ಜನಜಂಗುಳಿಯನ್ನು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಚದುರಿಸಿದರು.