ಶ್ರೀಮಂಗಲ, ಮೇ ೩೦: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿ.ಪಿ.ಎಲ್. ಪಡಿತರ ಕಾರ್ಡ್ ಫಲಾನುಭವಿಗಳಿಗೆ ಸರಕಾರ ಕೋವಿಡ್-೧೯ ಲಾಕ್ಡೌನ್ ಹಿನ್ನೆಲೆ ಉಚಿತ ಅಕ್ಕಿ ಹಾಗೂ ಗೋಧಿ ನೀಡುತ್ತಿದ್ದು, ಕಾರ್ಡ್ಗೆ ಅರ್ಜಿ ಸಲ್ಲಿಸಿ, ವಿತರಣೆಗೊಳ್ಳದವರಿಗೂ ಈ ಸೌಲಭ್ಯ ನೀಡಬೇಕು. ಕಾರ್ಡ್ ವಿತರಣೆಗೊಳ್ಳದೆ, ಕಾರ್ಡ್ ಹೊಂದಿಲ್ಲದವರಿಗೆ ಈ ಸೌಲಭ್ಯ ಸಿಗುತ್ತಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕೆಂದು ಎಂದು ಬಿರುನಾಣಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ.ಕೆ. ನಾಣಯ್ಯ ಮನವಿ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಲಾಕ್ಡೌನ್ ಸಮಯದಲ್ಲಿ ಸೌಲಭ್ಯಕ್ಕೆ ಅರ್ಹರಾಗಿದ್ದರೂ, ಕಾರ್ಡ್ ಇಲ್ಲದೆ ಬಡ ಕುಟುಂಬ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಹೆಚ್ಚಾಗಿದ್ದು, ರಾತ್ರಿ ಮಳೆ ಗಾಳಿ ಹಿನ್ನೆಲೆ ವಿದ್ಯುತ್ ಕಡಿತವಾಗುತ್ತಿದೆ. ದೀಪ ಉರಿಸಲು ಉಚಿತ ಸೀಮೆಎಣ್ಣೆಯನ್ನು ಬಿ.ಪಿ.ಎಲ್. ಮತ್ತು ಎ.ಪಿ.ಎಲ್. ಕಾರ್ಡ್ದಾರರಿಗೆ ವಿತರಿಸಬೇಕು.
ಕೋವಿಡ್ ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ನೆರವು, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಅವರ ಸಂಪೂರ್ಣ ಜೀವನವನ್ನು ಸರಕಾರ ನಿಭಾಯಿಸಬೇಕು ಎಂದು ಮನವಿ ಮಾಡಿದ್ದಾರೆ.