ಸೋಮವಾರಪೇಟೆ, ಮೇ ೩೦: ರಾಜ್ಯ ಸರ್ಕಾರ ಕಪಟ ಕೋವಿಡ್ ಪ್ಯಾಕೇಜ್ ಘೋಷಿಸಿದೆ ಎಂದು ಆರೋಪಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಎಂ ಎಲ್) ರೆಡ್ ಸ್ಟಾರ್ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅವೈಜ್ಞಾನಿಕ ಕ್ರಮಗಳಿಂದ ಕೊರೊನಾ ನಿಗ್ರಹ ಸಾಧ್ಯವಾಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರದ ಕಪಟ ಪ್ಯಾಕೇಜ್ ಹಿಂಪಡೆದು ಎಲ್ಲಾ ಜನರಿಗೆ ಜೀವನದ ಖಾತ್ರಿ ನೀಡಬೇಕೆಂದು ಸಿಪಿಐ (ಎಂಎಲ್) ಜಿಲ್ಲಾ ಕಾರ್ಯದರ್ಶಿ ಎಸ್. ಆರ್. ಮಂಜುನಾಥ್ ಆಗ್ರಹಿಸಿದರು.
ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ಬರುವ ತನಕ ರಾಜ್ಯದ ಪ್ರತಿ ಬಡ ಕುಟುಂಬಕ್ಕೆ ಮಾಸಿಕ ೧೦ ಸಾವಿರ ರೂ. ಹಣ ಹಾಗೂ ಉಚಿತ ಪಡಿತರ ನೀಡಬೇಕು. ಎಲ್ಲಾ ಕಾರ್ಮಿಕ ಮತ್ತು ನೌಕರರಿಗೆ ಸಂಪೂರ್ಣ ಸಂಬಳ ನೀಡಬೇಕು. ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಬೇಕು. ಮಂದಿರ, ಮಸೀದಿ ಚರ್ಚುಗಳನ್ನು ಕೊರೋನಾ ಕೇರ್ ಸೆಂಟರ್ಗಳನ್ನಾಗಿ ಪರಿವರ್ತನೆ ಮಾಡಬೇಕು. ಎಲ್ಲಾ ಆಸ್ಪತ್ರೆಗಳನ್ನು ರಾಷ್ಟಿçÃಕರಣಗೊಳಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.
ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ, ಪದಾಧಿಕಾರಿಗಳಾದ ಜಯಣ್ಣ, ಚಿನ್ನಪ್ಪ, ಮುತಣ್ಣ, ಸಾವಿತ್ರಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.