ಮಡಿಕೇರಿ, ಮೇ ೨೯: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾ ದೇಶವ್ಯಾಪಿ ಕರೆ ನೀಡಿದ್ದ ಕರಾಳ ದಿನಾಚರಣೆ ಹಿನ್ನೆಲೆ ಕೊಡಗು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಕೂಡ ಬೆಂಬಲ ಸೂಚಿಸಿ ಜಿಲ್ಲೆಯ ವಿವಿಧೆಡೆ ಕಪ್ಪು ಬಾವುಟ ಪ್ರದರ್ಶಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಮಡಿಕೇರಿ, ಬಾಳುಗೋಡು, ಹಳ್ಳಿಗಟ್ಟು, ಪಾಲೇಮಾಡು, ಸೋಮವಾರಪೇಟೆ ಮತ್ತಿತರೆಡೆ ಸಮಿತಿಯ ಪ್ರಮುಖರು ಹಾಗೂ ಸದಸ್ಯರು ಕಪ್ಪುಧ್ವಜ ಪ್ರದರ್ಶಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕರಾಳ ದಿನ ಆಚರಿಸಿದರು.

ರೈತ ವಿರೋಧಿಯಾಗಿರುವ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಚಿತಪಡಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ವಾಪಸ್ ಪಡೆಯಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವರ್ಷಕ್ಕೆ ೧೦೦ ದಿನಗಳ ಬದಲಾಗಿ ೨೦೦ ದಿನಗಳ ಕೆಲಸವನ್ನು ಒದಗಿಸಬೇಕು. ದಿನಗೂಲಿಯನ್ನು ರೂ.೬೦೦ಕ್ಕೆ ಏರಿಸಬೇಕು. ``ಮನ್‌ರೇಗಾ'' ಸೌಲಭ್ಯವನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೊರೊನಾ ಲಸಿಕೆಗಳನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ವಿತರಣೆ ಮಾಡಬೇಕು. ಸಮರ್ಪಕ ಸೌಲಭ್ಯಗಳೊಂದಿಗೆ ಕ್ವಾರೆಂಟೇನ್ ಕೇಂದ್ರಗಳನ್ನು ತೆರೆಯಬೇಕು. ಪರೀಕ್ಷೆ ಮತ್ತು ಔಷಧಿಗಳ ವರದಿಗಳ ಪ್ರಕಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮತ್ತು ಔಷಧಿಗಳು ಉಚಿತವಾಗಿ ಎಲ್ಲರಿಗೂ ದೊರೆಯುವಂತಾಗಬೇಕು.

೧೦ ಕೆ.ಜಿ. ಆಹಾರ ಧಾನ್ಯಗಳನ್ನು (ಅಕ್ಕಿ, ಗೋದಿ) ಇತರ ದಿನಸಿಗಳಾದ ಅಡುಗೆ ಎಣ್ಣೆ, ದ್ವಿದಳ ಧಾನ್ಯಗಳು, ಸಕ್ಕರೆ ಇತ್ಯಾದಿ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಮುಂದಿನ ೬ ತಿಂಗಳ ಕಾಲದವರೆಗೆ ಪೂರೈಸಬೇಕು ಎಂದು ಆಗ್ರಹಿಸಿದರು.