ವೀರಾಜಪೇಟೆ, ಮೇ ೨೯: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಬೇತ್ರಿಯ ಕಾವೇರಿ ಹೊಳೆಯ ಬದಿಯಲ್ಲಿರುವ ವೀರಾಜಪೇಟೆ ನಲ್ಲಿ ನೀರು ಸರಬರಾಜು ಕೇಂದ್ರದ ಮೂಲ ಸ್ಥಾವರವನ್ನು ನೀರಿನ ಮಟ್ಟದಿಂದ ಇನ್ನು ಎತ್ತರಿಸುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೇತ್ರಿಯ ಕಾವೇರಿ ಹೊಳೆಯ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪ್ರತಿ ವರ್ಷದ ಮಳೆಗಾಲದಲ್ಲಿ ಬೇತ್ರಿ ಗ್ರಾಮದ ಕಾವೇರಿ ಹೊಳೆಯ ನೀರು ಏರಿಕೆಯಾದಂತೆ ನೀರು ಸರಬರಾಜು ಕೇಂದ್ರದ ಮೂಲ ಸ್ಥಾವರದ ಕೆಳ ಭಾಗದಲ್ಲಿ ಮರಳು ತುಂಬಿ ನೀರು ಶೇಖರಣೆಗೆ ಅಡಚಣೆ ಉಂಟಾಗುತ್ತಿತ್ತು. ಇದರಿಂದ ವೀರಾಜಪೇಟೆಯ ನಲ್ಲಿ ನೀರಿನ ಬಳಕೆದಾರರಿಗೆ ಅನೇಕ ದಿನಗಳ ತನಕ ತೊಂದರೆಯಾಗಿ ನೀರಿನ ಅಭಾವ ಕಾಣುತ್ತಿತ್ತು. ಮೂಲ ಸ್ಥಾವರವನ್ನು ಇನ್ನು ನೀರಿನ ಮಟ್ಟದಿಂದ ಅಗತ್ಯಕ್ಕೆ ತಕ್ಕಂತೆ ಎತ್ತರಿಸುವಂತೆ ತಜ್ಞರ ಅಭಿಪ್ರಾಯವಾಗಿತ್ತು. ಈಗ ಮೂಲ ಸ್ಥಾವರ ನೆಲ ಮಟ್ಟದಿಂದ ೨೫ ಅಡಿಗಳಿಗೂ ಅಧಿಕ ಎತ್ತರದಲ್ಲಿದೆ. ತಜ್ಞರ ಅಭಿಪ್ರಾಯದಂತೆ ಇನ್ನು ಇದರ ಮೇಲೆ ಸುಮಾರು ೧೫ ಅಡಿಗೆ ಎತ್ತರಿಸಿ ಕಾವೇರಿ ಹೊಳೆಯಿಂದ ಮರಳು ತುಂಬುವುದನ್ನು ತಡೆ ಮಾಡಿದರೆ ಭಾರೀ ಮಳೆಗೂ ವೀರಾಜಪೇಟೆಗೆ ನಲ್ಲಿ ನೀರನ್ನು ನಿರಂತರವಾಗಿ ಸರಬರಾಜು ಮಾಡಲು ಸಹಕಾರಿಯಾಗಲಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜೊತೆಗೆ ಪಟ್ಟಣ ಪಂಚಾಯಿತಿಗೆ ಕುಡಿಯುವ ನೀರಿನ ಹೊಸ ಯೋಜನೆಯೊಂದು ಪ್ರಸ್ತಾಪದಲ್ಲಿರುವುದನ್ನು ಅಧಿಕಾರಿಗಳು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದಾರೆ.
ಮೂಲ ಸ್ಥಾವರಕ್ಕೆ ಭೇಟಿಯ ನಂತರ ಬೇತ್ರಿ ಗ್ರಾಮದ ಕಾವೇರಿ ಹೊಳೆಯ ಆಜುಬಾಜಿನಲ್ಲಿರುವ ಮನೆಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಜಿಲ್ಲಾಧಿಕಾರಿಯ ಭೇಟಿಯ ಸಂದರ್ಭ ತಾಲೂಕು ತಹಶೀಲ್ದಾರ್ ಯೋಗಾನಂದ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಅಭಿಯಂತರ ಎನ್.ಎಂ. ಹೇಮ್ಕುಮಾರ್, ಉಪವಿಭಾಗಧಿಕಾರಿ ಈಶ್ವರ್ಖಂಡ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.