*ಗೋಣಿಕೊಪ್ಪ, ಮೇ ೨೯: ತಿತಿಮತಿ ಮರೂರು ಆಶ್ರಮ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಕ್ರಮಕೈಗೊಳ್ಳ ಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಮಾಹಿತಿ ನೀಡಿದ್ದಾರೆ.
ಆಶ್ರಮ ಶಾಲೆಗೆ ಭೇಟಿ ನೀಡಿದ ಅವರು, ಶಾಲೆಯ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ಸೋಂಕಿತರಿಗೆ ಉತ್ತಮ ಸೌಲಭ್ಯಗಳು ಸಿಗುವಂತೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿ ಗುರುಶಾಂತಪ್ಪ ಅವರಿಗೆ ಸೂಚಿಸಿದರು.
ತಾ. ೩೧ ರಂದು ಚೇತರಿಕೆ ಕೇಂದ್ರವನ್ನು ಜನರ ಅನುಕೂಲಕ್ಕೆ ಒದಗಿಸಲಾಗುವುದು. ಸುಮಾರು ೭೫ ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, ಮೇಲಿನ ಮಹಡಿಯಲ್ಲಿ ಮಹಿಳೆಯರಿಗೆ ಕೆಳಮಹಡಿಯಲ್ಲಿ ಪುರುಷರಿಗೆ ವ್ಯವಸ್ಥಿತವಾಗಿ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾವತಿ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ, ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತಪ್ಪ, ವೃತ್ತ ನಿರೀಕ್ಷಕ ಜಯರಾಮ್, ತಾಲೂಕು ಬಗರ್ಹುಕುಂ ಜಾಗೃತ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯರಾದ ಅನೂಪ್ಕುಮಾರ್, ಶಂಕರ, ಅಫ್ರೋಸ್, ವಿಜಯ, ಶ್ಯಾಮಲ, ಪಿ.ಡಿ.ಓ. ಮಮತಾ ಜಗದೀಶ್ ಹಾಜರಿದ್ದರು.
-ಎನ್.ಎನ್. ದಿನೇಶ್