ಸೋಮವಾರಪೇಟೆ, ಮೇ ೨೯: ಕೊರೊನಾ ವೈರಸ್ ಸಮಾಜದ ಎಲ್ಲಾ ವರ್ಗವನ್ನೂ ಸಂಕಷ್ಟಕ್ಕೆ ತಳ್ಳಿದ್ದು, ಬಡ ಕಾರ್ಮಿಕರ ಸಂಕಷ್ಟವAತೂ ಹೇಳತ್ತೀರದ್ದಾಗಿದೆ. ಕೂಲಿ ಕೆಲಸಕ್ಕೆ ತೆರಳಲೂ ಅಸಾಧ್ಯವಾಗಿರುವ ಸನ್ನಿವೇಶದ ನಡುವೆ ಹಲವಷ್ಟು ಕುಟುಂಬಗಳನ್ನು ಸೀಲ್‌ಡೌನ್ ಮಾಡಿದ್ದು, ಬದುಕು ಬಾಣಾಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸೋಮವಾರಪೇಟೆಯ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಒದಗಿಸುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.

ತಮ್ಮ ತೋಟದಲ್ಲಿದ್ದ ಕಿತ್ತಳೆ ಫಸಲನ್ನು ಒಂದೂವರೆ ಲಕ್ಷಕ್ಕೆ ಗುತ್ತಿಗೆ ನೀಡಿರುವ ರವೀಂದ್ರ ಅವರು ಅದರ ಸಂಪೂರ್ಣ ಹಣವನ್ನು ಬಡವರ ಸಂಕಷ್ಟಕ್ಕೆ ನೆರವಾಗಲು ವಿನಿಯೋಗಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ತೀರಾ ಸಂಕಷ್ಟಕ್ಕೆ ಸಿಲುಕಿರುವ ಬಡ ಕೂಲಿ ಕಾರ್ಮಿಕರು, ಸೀಲ್‌ಡೌನ್‌ಗೆ ಒಳಗಾಗಿ ದಿನನಿತ್ಯದ ಜೀವನ ನಡೆಸಲು ಹೆಣಗಾಡುತ್ತಿರುವ ಮಂದಿಗೆ ತಲಾ ೧ ಸಾವಿರ ಮೌಲ್ಯದ ದಿನಸಿ ಪದಾರ್ಥಗಳ ಕಿಟ್ ನೀಡುವ ಮೂಲಕ ನೆರವಾಗುತ್ತಿದ್ದಾರೆ.

ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಅವರು ಕಳೆದ ವರ್ಷದ ಕೊರೊನಾ ಸಂಕಷ್ಟದ ಸಂದರ್ಭವೂ ಅಶಕ್ತ ಕುಟುಂಬಗಳಿಗೆ ನೆರವಾಗಿದ್ದರು. ಈ ಬಾರಿಯೂ ಸೇವಾ ಕಾರ್ಯವನ್ನು ಮುಂದುವರೆಸಿರುವ ಅವರು, ಈಗಾಗಲೇ ಸೋಮವಾರಪೇಟೆ ಪಟ್ಟಣ, ಹಾನಗಲ್ಲು, ಕಾನ್ವೆಂಟ್‌ಬಾಣೆ, ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ೬೦ಕ್ಕೂ ಅಧಿಕ ಕುಟುಂಬಗಳಿಗೆ ತಲಾ ೧ ಸಾವಿರ ಮೌಲ್ಯದ ದಿನಸಿ ಕಿಟ್ ವಿತರಿಸಿದ್ದಾರೆ.

ಸಮಾಜ ಸೇವೆಯೇ ಭಗವಂತನ ಸೇವೆಯಾಗಿದ್ದು, ನೊಂದವರ ಸಂಕಷ್ಟಕ್ಕೆ ಸ್ಪಂದಿಸಿದಾಗ, ಅವರ ಮೊಗದಲ್ಲಿ ಮೂಡುವ ಸಮಾಧಾನದ ನಗುವನ್ನು ನೋಡುವಾಗ ಸಿಗುವ ತೃಪ್ತಿ ಬೇರೆಲ್ಲೂ ಸಿಗದು ಎಂದು ಹರಪಳ್ಳಿ ರವೀಂದ್ರ ಅಭಿಪ್ರಾಯಿಸುತ್ತಾರೆ.

ದಿನಸಿ ಕಿಟ್‌ಗಳ ವಿತರಣೆ ಸಂದರ್ಭ ತಾಲೂಕು ಒಕ್ಕಲಿಗರ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಹೆಚ್.ಕೆ. ಪ್ರಸಿ ಗೌಡಳ್ಳಿ, ಹಾನಗಲ್ಲು ಗ್ರಾ.ಪಂ. ಸದಸ್ಯ ಬಗ್ಗನ ಸುದೀಪ್, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪ್ರಮುಖರಾದ ಕೂಗೂರು ರಘು, ನಗರಳ್ಳಿ ಬಸಪ್ಪ ಅವರುಗಳು ಹಾಜರಿದ್ದರು.