ಮಡಿಕೇರಿ, ಮೇ ೨೮: ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಲಾಗಿದೆ.

ಜಿಲ್ಲಾ ವಿಶೇಷ ಮಕ್ಕಳ ಪೊಲೀಸ್ ಘಟಕಕ್ಕೆ ಬಂದ ದೂರನ್ನು ಆಧರಿಸಿ ಚೆಟ್ಟಳ್ಳಿ ಗ್ರಾಮಗಳ ಕಾಫಿ ತೋಟ ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆಯಡಿ ತಪಾಸಣೆಯನ್ನು ನಡೆಸಲಾಯಿತು. ಕಾರ್ಯಾಚರಣೆ ಸಂದರ್ಭ ದಿನಸಿ ಅಂಗಡಿ ಕೆಲಸಗಳಲ್ಲಿ ನಿರತರಾಗಿದ್ದ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಮಕ್ಕಳ ಪೋಷಣೆ ಹಾಗೂ ರಕ್ಷಣೆಯ ಉದ್ದೇಶದಿಂದ ಮಡಿಕೇರಿಯಲ್ಲಿರುವ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳನ್ನು ಪುನರ್ವಸತಿಗೊಳಿಸಲಾಗಿದೆ ಹಾಗೂ ತಪ್ಪಿತಸ್ಥ ಮಾಲೀಕರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಎಂ.ಬಿ.ಸುಮತಿ ಹಾಗೂ ಯು.ಎ.ಮಹೇಶ್ , ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್ ಶೀರಾಝ್ ಅಹ್ಮದ್, ಹಿರಿಯ ಕಾರ್ಮಿಕ ನಿರೀಕ್ಷಕಿ ಕೆ.ಎನ್. ಲೀನಾ, ಸಿಬ್ಬಂದಿಗಳಾದ ಮಹೇಶ್, ಶಿವರಾಜ್ ಹಾಗೂ ಮಂಜುಳ ಇದ್ದರು.