*ಗೋಣಿಕೊಪ್ಪ, ಮೇ ೨೮: ದಿನಪತ್ರಿಕೆ ಹಾಗೂ ಹಾಲು ತರಲು ತೆರಳುತ್ತಿದ್ದ ವೇಳೆ ಒಂಟಿಸಲಗ ದಾಳಿ ನಡೆಸಿದ ಪರಿಣಾಮ ತಿತಿಮತಿ ಗ್ರಾಮದ ದೇವಮಚ್ಚಿ ನಿವಾಸಿ ನಾಣು (೮೦) ಎಂಬವರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ ೬.೧೫ಕ್ಕೆ ಈ ಘಟನೆ ನಡೆದಿದ್ದು ತಿತಿಮತಿ ಗ್ರಾಮ ಆನೆಯ ದಾಳಿಗೆ ಬೆಚ್ಚಿಬಿದ್ದಿದ್ದು, ಘಟನೆಯಿಂದ ಜನತೆಯ ಮನದಲ್ಲಿ ದುಃಖ ಮಡುಗಟ್ಟಿದೆ.

ಬೆಳಿಗ್ಗೆ ಆರು ಗಂಟೆಗೆ ತಿತಿಮತಿ ವ್ಯಾಪ್ತಿಯ ಅರಣ್ಯದ ಮೂಲಕ ಇಲ್ಲಿನ ಅರಣ್ಯ ಕಚೇರಿ ಮುಂಭಾಗದಿAದ ಒಂಟಿ ಸಲಗ ಮುಖ್ಯ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ಸಂಚಾರ ನಡೆಸಿದೆ. ತಿತಿಮತಿ ಬಾಳುಮನೆ ಸೇತುವೆ ಸಮೀಪದಿಂದ ಹೊಳೆಯ ಮೂಲಕ ನಡೆದು ದೇವಮಚ್ಚಿ ಅರಣ್ಯ ಭಾಗಕ್ಕೆ ತೆರಳುತ್ತಿದ್ದ ಸಂದರ್ಭ ಎದುರಾದ ನಾಣು ಅವರ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದೆ ಎಂದು ಆನೆಯ ಸಂಚಾರವನ್ನು ಪ್ರತ್ಯಕ್ಷವಾಗಿ ಕಂಡವರು ಮಾಹಿತಿ ನೀಡಿದ್ದಾರೆ.

ನಾಣು ಅವರ ಬೆನ್ನಿನ ಭಾಗಕ್ಕೆ ಆನೆ ಮೆಟ್ಟಿದ್ದು, ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೈಲರ್ ವೃತ್ತಿಯ ಮೂಲಕ ಬದುಕು ನಡೆಸುತ್ತಿದ್ದ ನಾಣು, ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ.

ಸ್ಥಳಕ್ಕೆ ವನ್ಯಜೀವಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ಮತ್ತಿಗೋಡು ವಲಯ ಅರಣ್ಯಧಿಕಾರಿ ಕಿರಣ್, ತಿತಿಮತಿ ಅರಣ್ಯ ಅಧಿಕಾರಿ ಅಶೋಕ್ ಹನುಗುಂದ

(ಮೊದಲ ಪುಟದಿಂದ) ಹಾಗೂ ಸಿಬ್ಬಂದಿ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯ ರಾಮ್, ಉಪನಿರೀಕ್ಷಕ ಸುಬ್ಬಯ್ಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡರು. ಪ್ರಾಥಮಿಕ ಹಂತವಾಗಿ ಇಲಾಖೆಯಿಂದ ಎರಡು ಲಕ್ಷ ರೂಪಾಯಿಗಳ ಚೆಕ್ಕನ್ನು ಅರಣ್ಯಾಧಿಕಾರಿಗಳು ವಿತರಿಸಿದರು. ಉಳಿದ ಮೊತ್ತವನ್ನು ನೇರವಾಗಿ ಕುಟುಂಬದವರು ದಾಖಲಾತಿ ನೀಡಿದ ನಂತರ ಖಾತೆಗೆ ಜಮಾ ಮಾಡುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದರು.

ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯ ಅನೂಪ್‌ಕುಮಾರ್, ಅಫ್ರೋಸ್, ಸರಸ್ವತಿ ಸೇರಿದಂತೆ ಹಲವು ಸದಸ್ಯರು, ಗ್ರಾಮಸ್ಥರು ಹಾಜರಿದ್ದು, ಸಂತಾಪ ವ್ಯಕ್ತಪಡಿಸಿದರು.

ಆನೆಗಳನ್ನು ಅರಣ್ಯಕ್ಕೆ ಅಟ್ಟಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಘಟನೆ ಮರುಕಳಿಸಲು ಕಾರಣವಾಗುತ್ತಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ಈ ಸಂದರ್ಭ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. -ಎನ್.ಎನ್. ದಿನೇಶ್