ಸಿದ್ದಾಪುರ, ಮೇ ೨೮: ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ನದಿ ತೀರದ ನಿವಾಸಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರವಾಹ ಪೀಡಿತ ಪ್ರದೇಶಗಳಾದ ಕೊಂಡAಗೇರಿ ಹಾಗೂ ಸಿದ್ದಾಪುರದ ಕರಡಿಗೋಡು ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ರವರು ನಂತರ ಮಾತನಾಡಿ ಕರಡಿಗೋಡು ಗುಹ್ಯ ಗ್ರಾಮದ ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ, ಸರಕಾರಿ ಭೂಮಿಗಳನ್ನು ಗುರುತಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ಅಲ್ಲದೇ ನದಿ ತೀರದ ನಿವಾಸಿಗಳು ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಇವರುಗಳಿಗೆ ಮಳೆಗಾಲದ ಸಂದರ್ಭದಲ್ಲಿ ಇವರ ಜೀವಕ್ಕೆ ತೊಂದರೆ ಆಗದ ರೀತಿಯಲ್ಲಿ ಪ್ರವಾಹ ಬರುವ ಮುಂಚಿತ ಮುಂಜಾಗ್ರತ ಕ್ರಮವಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗುವು ದೆಂದರು. ಅಲ್ಲದೇ ಪುನರ್ವಸ ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ತಹಶೀಲ್ದಾರ್ಗೆ ತಿಳಿಸಿದರು.
ಪ್ರವಾಹದ ಸಂದರ್ಭದಲ್ಲಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಕಂದಾಯ ಇಲಾಖೆಯ ವತಿಯಿಂದ ನದಿ ತೀರದ ಎಲ್ಲಾ ನಿವಾಸಿಗಳ ಮನೆ ಮನೆಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಮಳೆಗಾಲದಲ್ಲಿ ನದಿ ತೀರದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಮಳೆಗಾಲ ಸಮೀಪಿಸುತ್ತಿದ್ದು, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾರ್ಡ್ವಾರು ಸದಸ್ಯರುಗಳನ್ನು ಸೇರಿಸಿ ಅನಾಹುತ ಸಂಭವಿಸದAತೆ ತಂಡ ರಚನೆ ಮಾಡಿ ಕಾರ್ಯಪ್ರವೃತ್ತರಾಗಬೇಕೆಂದು ಸಿದ್ದಾಪುರದ ಪಿಡಿಓ ವಿಶ್ವನಾಥ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ನದಿತೀರದ ನಿವಾಸಿಗಳಿಗೆ ಮಳೆಗಾಲದ ಪ್ರವಾಹದಲ್ಲಿ ಸಮಸ್ಯೆ ಆಗದ ರೀತಿಯಲ್ಲಿ ಎಚ್ಚರವಹಿಸಬೇಕೆಂದರು. ಈ ಸಂದರ್ಭ ಜಿಲ್ಲಾ ಉಪವಿಭಾಗಾಧಿಕಾರಿ ಈಶ್ವರ್ಕುಮಾರ್ ಖಂಡು, ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ತಹಶೀಲ್ದಾರ್ ಯೋಗಾನಂದ್, ಕಂದಾಯ ಪರಿವೀಕ್ಷಕಿ ಭಾನುಪ್ರಿಯ ಹಾಗೂ ಹರೀಶ್, ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್, ಗ್ರಾ.ಪಂ. ಅಧ್ಯಕ್ಷೆ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್ ಹಾಜರಿದ್ದರು.
ನೆಲ್ಯಹುದಿಕೇರಿಗೆ ಭೇಟಿ
ನೆಲ್ಯಹುದಿಕೇರಿಯ ಪ್ರವಾಹ ಪೀಡಿತ ಪ್ರದೇಶಗಳಾದ ಬೆಟ್ಟದಕಾಡು ಭಾಗಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬೆಟ್ಟದಕಾಡುವಿನಲ್ಲಿ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರಿಗೆ ನಿರ್ಮಿಸಿರುವ ೧೫ ಮನೆಗಳನ್ನು ಹಾಗೂ ೩೫ ಸಂತ್ರಸ್ತರಿಗೆ ಉಚಿತವಾಗಿ ನೀಡುತ್ತಿರುವ ಜಾಗವನ್ನು ಪರಿಶೀಲನೆ ಮಾಡಿದರು. ಅಲ್ಲದೇ ಸಂತ್ರಸ್ತರಿಗೆ ಹಸ್ತಾಂತರ ಮಾಡುವ ಮನೆಗಳ ಒಳಗೆ ಪ್ರವೇಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನೆಲ್ಯಹುದಿಕೇರಿ ಭಾಗದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಗುರುತಿಸಿದ್ದ ಅರೆಕಾಡು ಗ್ರಾಮದಲ್ಲಿರುವ ಅಭ್ಯತ್ಮಂಗಲಕ್ಕೆ ಭೇಟಿ ನೀಡಿದರು. ಆದರೆ ಈ ನಿವೇಶನಗಳಿಗೆ ತೆರಳುವ ರಸ್ತೆಯಲ್ಲಿ ಗುಂಡಿಗಳಿದ್ದು, ಇಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಿರು ಸೇತುವೆಯನ್ನು ಕೂಡಲೇ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳು ಪಿಡಿಓ ಅನಿಲ್ಕುಮಾರ್ ನಿರ್ದೇಶಿಸಿದರು. ಪಂಚಾಯಿತಿಯ ಮೂಲಕ ಈ ಬಾರಿಯ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳ ವಾಸಕ್ಕೆ ಶಾಲೆ - ಹಾಸ್ಟೇಲ್ ಕಲ್ಯಾಣ ಮಂಟಪಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗುವದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಎ.ಸಿ. ಈಶ್ವರ್ಕುಮಾರ್ ಖಂಡು, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್, ವಾಲ್ನೂರು - ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಪಿಡಿಓ ಅನಿಲ್ಕುಮಾರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮಲೆಕ್ಕಿಗ ಸಚಿನ್ ಇನ್ನಿತರರು ಹಾಜರಿದ್ದರು.
- ಚಿತ್ರ, ವರದಿ : ವಾಸು