ಕೂಡಿಗೆ, ಮೇ ೨೮: ಕರ್ನಾಟಕ ರಾಜ್ಯದ ಪ್ರಪ್ರಥಮ ಡೈರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಡಗು ಜಿಲ್ಲೆಯ ಕೂಡಿಗೆಯ ಡೈರಿಯು ಅಂದಿನಿAದ ಇಂದಿನವರೆಗೂ ಹಾಸನ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿದೆ.

ಕೂಡಿಗೆ ಡೈರಿಯಿಂದ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲೂಕು ಮತ್ತು ಹೋಬಳಿ ವ್ಯಾಪ್ತಿಯಲ್ಲಿ ಕ್ಷೀರ ಕೇಂದ್ರಗಳನ್ನು ಸ್ಥಾಪಿಸಿ, ಅಲ್ಲದೆ ಆಯಾ ವ್ಯಾಪ್ತಿಯ ಹಾಲಿನ ಗ್ರಾಹಕರಿಗೆ ಅನುಕೂಲವಾಗುವಂತೆ ಆಯಾ ವಾರ್ಡ್ಗಳಲ್ಲಿಯೂ ಬೂತ್ ಏಜೆಂಟ್ ನೇಮಕ ಮಾಡಿ ಅವರುಗಳ ಮೂಲಕ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ಹಾಲನ್ನು ದಿನಂಪ್ರತಿ ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ.

ಜಿಲ್ಲೆಯ ಎಲ್ಲಾ ಕ್ಷೀರ ಕೇಂದ್ರ ಮತ್ತು ಉಪ ಕೇಂದ್ರಗಳಿಗೆ ಸೇರಿದಂತೆ ಮೊದಲು ೫೦ ಸಾವಿರ ಲೀಟರ್ ಹಾಲು ಕೂಡಿಗೆ ಡೈರಿಯಿಂದ ವಿವಿಧ ಭಾಗಗಳಿಗೆ ಡೈರಿಯ ವಾಹನಗಳ ಮೂಲಕ ನಿಗದಿಪಡಿಸಿದ ಕೇಂದ್ರಕ್ಕೆ ಹೋಗಿ ಸರಬರಾಜು ಆಗುತ್ತಿತ್ತು.

ಆದರೆ ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಕೂಡಿಗೆ ಡೈರಿಯಿಂದ ವಾರದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಕೇವಲ ೪೦ ಸಾವಿರ ಲೀಟರ್ ಹಾಲು ಮಾರಾಟವಾಗುತ್ತದೆ. ಉಳಿದ ದಿನಗಳಲ್ಲಿ ಕೇವಲ ೩೦ ಸಾವಿರದಿಂದ ೩೧ ಸಾವಿರದಷ್ಟು ಸರಬರಾಜು ಆಗಿ ಮಾರಾಟವಾಗುತ್ತಿದೆ.

ಲಾಕ್‌ಡೌನ್ ಹಿನ್ನೆಲೆ ಯಾವುದೇ ಹೊಟೇಲ್ ಮತ್ತು ಇತರ ವ್ಯಾಪಾರಗಳು ಸ್ಥಗಿತಗೊಂಡಿರುವ ಹಿನ್ನೆಲೆ ಹಾಲಿನ ಮಾರಾಟವು ಕಡಿಮೆಯಾಗಿದೆ ಎಂದು ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ತಿಳಿಸಿದ್ದಾರೆ.

ಹಾಲು ಮುಖ್ಯವಾಗಿ ಬೇಕಾಗಿರುವುದರಿಂದ ಜಿಲ್ಲೆಯ್ಲ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೂಡಿಗೆ ಡೈರಿಯಲ್ಲಿ ದಿನದ ೨೪ ಗಂಟೆಗಳಲ್ಲಿ ಹಂತಹAತವಾಗಿ ಕರ್ತವ್ಯ ನಿರ್ವಹಿಸಿ ದಿನದ ಬೆಳಗಿನ ಜಾವಕ್ಕೆ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಡಿ.ಎನ್. ಮಲ್ಲೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ೩೩ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ ಇವುಗಳಿಂದ ೨೨ ಸಾವಿರ ಲೀಟರ್ ಹಾಲು ದಿನಂಪ್ರತಿ ಸಂಗ್ರಹವಾಗಿ, ಕೂಡಿಗೆ ಡೈರಿಗೆ ಬರುತ್ತದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾರಾಟಕ್ಕಿಂತ ಹೆಚ್ಚುವರಿ ಹಾಲು ಬೇಕಾಗಿರುವುದರಿಂದ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಗಳ ಜೊತೆಗೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ೬೪ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಕೂಡಿಗೆ ಡೈರಿಗೆ ಸರಬರಾಜು ಆಗುತ್ತಿದೆ. ಒಟ್ಟು ಕೂಡಿಗೆ ಡೈರಿಗೆ ೫೫ ಸಾವಿರ ಲೀಟರ್ ಹಾಲು ದಿನಂಪ್ರತಿ ಬರುತ್ತದೆ ಎಂದು ಹಾಸನ ಹಾಲು ಒಕ್ಕೂಟದ ಸಹಕಾರ ಸಂಘಗಳ ವಿಸ್ತಾರಣಾಧಿಕಾರಿ ವೀಣಾ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ಹಾಲಿನ ಗ್ರಾಹಕರಿಗೆ ಯಾವುದೆ ರೀತಿಯ ತೊಂದರೆಗಳು ಆಗದಂತೆ ಮತ್ತು ಕೋವಿಡ್‌ನ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ಕೂಡಿಗೆ ಡೈರಿಯಲ್ಲಿ ಶಿಥಿಲೀಕರಣಗೊಳಿಸಿ ಆಯಾ ದಿನಗಳಲ್ಲಿ ಮಾರಾಟಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೆ ಕೂಡಿಗೆ ಡೈರಿಗೆ ಸಂಗ್ರಹವಾಗುವ ಹೆಚ್ಚುವರಿ ಹಾಲನ್ನು ಹಾಸನಕ್ಕೆ ಕಳುಹಿಸಲಾಗುವುದು ಎಂದು ವ್ಯವಸ್ಥಾಪಕ ನಂದೀಶ್ ತಿಳಿಸಿದ್ದಾರೆ.

ಕೂಡಿಗೆ ಡೈರಿಯು ಹಾಸನ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಅಧೀನದಲ್ಲಿ ನಡೆಯುತ್ತದೆ. ಆಡಳಿತ ಮಂಡಳಿಯ ತೀರ್ಮಾನದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ