ಗೋಣಿಕೊಪ್ಪಲು, ಮೇ ೨೭: ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆ ಪ್ರತಿಯೋರ್ವ ನಾಗರಿಕನು ಎಚ್ಚರಿಕೆಯಿಂದ ಇರಬೇಕು ಎಂದು ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ತಿಳಿಸಿದರು.
ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡ ಕೋವಿಡ್-೧೯ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ಹತೋಟಿಗೆ ತರಲು ಸರ್ಕಾರ ಮುಂಚೂಣಿ ಕಾರ್ಯಕರ್ತರು ಹಾಗೂ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹಗಲು-ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.
ಇವರೆಲ್ಲರೂ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಹಾಡಿಯಲ್ಲಿ ಇರುವ ಜನರು ಲಸಿಕೆ ಪಡೆಯಲು ಮುಂದೆ ಬರಬೇಕು, ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಉಚಿತವಾಗಿ ನಡೆಯುತ್ತಿದೆ. ಇದರ ಪ್ರಯೋಜನ ಪಡೆಯಬೇಕು, ದೂರದ ಊರಿನಿಂದ ತಮ್ಮ ಗ್ರಾಮಕ್ಕೆ ಬರುವವರ ಬಗ್ಗೆ ಹೆಚ್ಚಿನ ನಿಗಾವಹಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಾಡಿಯ ಪ್ರತಿ ನಾಗರಿಕನ ಜವಾಬ್ದಾರಿ ಇದೆ ಎಂದು ತಿಳಿಸಿದರು.
ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಕಂಡಿ, ಮಜ್ಜಿಗೆಹಳ್ಳ, ಅಕ್ಕೆಮಾಳ, ಬೊಂಬುಕಾಡು ಸೇರಿದಂತೆ ಗಿರಿಜನರು ವಾಸಿಸುವ ಇನ್ನಿತರ ಹಾಡಿಗಳಿಗೆ ತೆರಳಿದ ಕಂದಾಯ ಇಲಾಖೆಯ ತಂಡ ಗಿರಿಜನರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು.
ಈ ವೇಳೆ ಉಪ ತಹಶೀಲ್ದಾರ್ ದಾಕ್ಷಾಯಿಣಿ, ಕಂದಾಯ ಪರಿವೀಕ್ಷಕ ಮಂಜುನಾಥ್, ಎ.ಎಸ್.ಐ. ವೆಂಕಟೇಶ್, ಗ್ರಾಮ ಲೆಕ್ಕಿಗ ಯಶ್ವಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕರು, ಮುಂತಾದವರು ಇದ್ದರು.