ಚೆಟ್ಟಳ್ಳಿ, ಮೇ ೨೭: ಕೊಡಗಿನ ವಿಶಿಷ್ಟತೆಗಳಲ್ಲಿ ಒಂದಾಗಿರುವ ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಆಚರಿಸಲ್ಪಡುವ ಸಂಭ್ರಮ-ಸಡಗರದ ಹಾಗೂ ಇದರೊಂದಿಗೆ ಧಾರ್ಮಿಕತೆಯನ್ನು ಒಳಗೊಂಡ ಬೇಡು ಹಬ್ಬ (ಬೋಡ್ ನಮ್ಮೆ)ಕ್ಕೆ ಕಳೆದ ಎರಡು ವರ್ಷಗಳಿಂದಲೂ ಅಡ್ಡಿಯಾಗಿದೆ.
ಏಪ್ರಿಲ್-ಮೇ ತಿಂಗಳಿನಲ್ಲಿ ಹಲವಾರು ಕಡೆಗಳಲ್ಲಿ ವಿವಿಧ ವೇಷ-ಭೂಷಣಗಳೊಂದಿಗೆ ಆಯಾ ಗ್ರಾಮ ವ್ಯಾಪ್ತಿಯಲ್ಲಿನ ಪದ್ಧತಿ-ಕಟ್ಟುಪಾಡುಗಳಿಗೆ ಒಳಪಟ್ಟಂತೆ ಈ ವಿಶಿಷ್ಟ ಆಚರಣೆ ನಡೆಯುತ್ತದೆ. ಕೆಲವೆಡೆ ಪ್ರತಿವಷ
ð ಹಾಗೂ ಇನ್ನು ಹಲವೆಡೆಗಳಲ್ಲಿ ಮೂರು ವರ್ಷಕ್ಕೊಮ್ಮೆ ಈ ಸಂಭ್ರಮದ ಹಬ್ಬ ನಡೆಯುವುದು ವಾಡಿಕೆ.
ಜೂನ್ ೧ರ ಪಾರಣ ನಮ್ಮೆಯ ಮೂಲಕ ಈ ಆಚರಣೆಗೆ ತೆರೆ ಬೀಳುತ್ತಿತ್ತು. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಮತ್ತೆ ಮರುಕಳಿಸಿದ ಕೊರೊನಾ ಕಾರಣದಿಂದಾಗಿ ಈ ಆಚರಣೆಗೆ ಅಡ್ಡಿಯಾಗಿದೆ. ಈ ಧಾರ್ಮಿಕತೆಗೆ ತಡೆಯಾಗಿರುವ ಸನ್ನಿವೇಶ ಆಯಾ ವ್ಯಾಪ್ತಿಯ ಗ್ರಾಮದ ಜನತೆಯಲ್ಲಿ ನಿರಾಸೆಯನ್ನು ಮೂಡಿಸಿದಂತಾಗಿದೆ.
ಅAದೊAದು ದಿನ ಊರಿನವರೆಲ್ಲ ಸೇರಿ ಅಲಂಕೃತ ಬಿದಿರ ಕುದುರೆ.... ಹುಲಿವೇಷ... ಭೂತದ ವೇಷ, ಹೆಣ್ಣಿನ ವೇಷ... ಇದರೊಂದಿಗೆ ವಿವಿಧ ವೇಷಧರಿಸಿದ ಯುವಕರು.. ಕೆಸರು ಬಳ್ಳಿಗಳನ್ನು ಮೈಯ್ಯಲೆಲ್ಲ ಮೆತ್ತಿ ಪರಸ್ಪರ ಕೆಸರೆರಚಾಟ.. ಪೊಲಂದರೆ... ವಾಲಗ ಕುಣಿತಕ್ಕೆ ಕುಣಿದು ಭದ್ರಕಾಳಿ ದೇವಿಯನ್ನು ಕೊಂಡಾಡುವ ವಿಶಿಷ್ಟ ಆಚರಣೆಯ ವಾರ್ಷಿಕ ಹಬ್ಬವೇ ಈ ಬೋಡ್ನಮ್ಮೆಯ ವಿಶೇಷ. ಎರಡು ವರ್ಷಗಳ ಕೊರೊನಾ ಮಹಾಮಾರಿ ಹಬ್ಬ ಆಚರಣೆಗೆ ಅಡ್ಡಿಯಾಗಿದೆ.
ಕುಂದತ್ಬೊಟ್ಟ್ಲ್ ನೇಂದಕುದುರೆ ಪಾರಣಮಾನಿಲ್ ಅಳ್ಂಜಕುದುರೆ ಎಂಬ ನಾಣ್ನುಡಿಯಿದೆ. ಅಂದರೆ ಬೇಡುಹಬ್ಬದಲ್ಲಿ ಕಟ್ಟುವ ಕುದುರೆ ಕುಂದಬೆಟ್ಟದಲ್ಲಿ ಎದ್ದು ಪಾರಣಬೋಡ್ ಹಬ್ಬದಲ್ಲಿ ಇಳಿಯುವುದು ಎಂದರ್ಥ. ಪಾರಣಬೋಡ್ ಹಬ್ಬ ಮುಗಿದ ಬಳಿಕ ಮುಂದಿನ ವರ್ಷ ಕುಂದದಲ್ಲಿ ನಡೆಯುವ ಬೋಡ್ ಹಬ್ಬವನ್ನೇ ಕಾಯಬೇಕು. ಇದು ಸಂಪ್ರದಾಯವಾಗಿದೆ.
ಅಕ್ಟೋಬರ್ ೧೮ ರಂದು ಕುಂದತ್ಬೊಟ್ಟ್ನಲ್ಲಿ ನಡೆವ ಬೋಡ್ನಮ್ಮೆ ವಿಶಿಷ್ಟ ರೀತಿಯಲ್ಲಿ ಕೂಡಿರುತ್ತದೆ. ನಂತರದಲ್ಲಿ ಚೆಂಬೆಬೆಳ್ಳೂರು ಗ್ರಾಮದ ಗ್ರಾಮ ದೇವತೆಯಾದ ಶ್ರೀ ಭದ್ರಕಾಳಿ ದೇವಾಲಯದಲ್ಲೂ ಬೋಡ್ನಮ್ಮೆ ವಿಶಿಷ್ಟ ರೀತಿಯಲ್ಲಿ ನಡೆಯುತ್ತದೆ. ಹಲವು ಸಂಪ್ರದಾಯಗಳ ನಡುವೆ ಹುಲಿ ವೇಷದಾರಿಗಳು ಒಂದೆಡೆಯಾದರೆ ಕೆಸರನ್ನು ಮೈಯ್ಯಲೆಲ್ಲ ಮೆತ್ತಿ ಬಂಡ್ಕಳಿ, ಪುರುಷರು ಹೆಣ್ಣಿನ ವೇಷ, ತಾಲಿಪಾಟ್, ಭೂತದ ವೇಷ, ಹಲವು ಮಾಡೆಲ್ಗಳು ಹೀಗೆ ಎಲ್ಲಾ ವಯಸ್ಸಿನವರು ಹತ್ತು ಹಲವು ವಿಶಿಷ್ಟ ವೇಷಗಳನ್ನು ಧರಿಸಿ ಮನೆ ಮನೆಗಳಿಗೆ ತೆರಳಿ ಕುಣಿದು ಪ್ರತಿ ಮನೆಯಿಂದ ಭಿಕ್ಷೆ ಕೇಳಿಪಡೆಯುವುದು ಸಂಪ್ರದಾಯ.
ನಂತರ ದೇವರ ಸನ್ನಿದಿಗೆ ಮರಳಿ ವೇಷ ಕಳಚುವ ಮೂಲಕ ಹರಕೆಯನ್ನು ತೀರಿಸುತ್ತಾರೆ. ದೇವರಪುರದ ಕುಂಡೆ ಹಬ್ಬ, ನಡಿಕೇರಿ ನಾಂಗಾಲ ಬಿಳುಗುಂದ, ಐಮಂಗಲ, ಕಾವಾಡಿ ಸೇರಿದಂತೆ ಹಲವೆಡೆ ಈ ಆಚರಣೆ ಇವೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ನೆಲೆಯಲ್ಲಿಯೂ ಬೋಡ್ ನಮ್ಮೆಯ ಆಚರಣೆ ಇದೆ. ತಕ್ಕಮುಖ್ಯಸ್ಥರ ಐನ್ಮನೆಯಿಂದ ವಿವಿಧ ವೇಷದಲ್ಲಿ ದೇವರ ಕಳಿಹಾಕಿ ಊರಿನ ಮನೆ ಮನೆ ಹೊರಡುತ್ತಾರೆ. ಕುದುರೆ ಹಾಗೂ ಮೊಗವನ್ನು ಸಿಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಾಲಯದ ಹತ್ತಿರದ ಅಂಬಲದಲ್ಲಿ ಕೃತಕವಾಗಿ ಮಾಡಿದ ಕುದುರೆ ಹಾಗೂ ಮೊಗ ಮುಖಾಮುಖಿಯಾಗುತ್ತದೆ. ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಆಲಂಗಿಸಿ ಕೆಸರು ಎರೆಚಾಡಿಕೊಳ್ಳುತ್ತಾರೆ. ನಂತರ ಊರಿನ ಭದ್ರಕಾಳಿ ದೇವಾಲಯದಲ್ಲಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯುತ್ತಾರೆ. ಬೆಸಗೂರು ಗ್ರಾಮದಲ್ಲಿ ಮೂರು ವರ್ಷಕೊಮ್ಮೆ ನಡೆಯುವ ಬೋಡ್ಹಬ್ಬ ದೇವಕಳಿ, ಊರು ಸುತ್ತುವುದು ಮಾರನೆಯ ದಿನ ಕುದುರೆ ತೆಗೆಯುವುದು, ದೇವರಮೊಗ, ಭಂಡಾರ ಹರಕೆ ಕಾಣಿಕೆ ಒಪ್ಪಿಸುವರು.
ಎಲ್ಲೆಡೆ ಬೋಡ್ಹಬ್ಬ ನಡೆದು ಬೇರಳಿನಾಡಿನ ಪಾರಣಬೋಡ್ ಹಬ್ಬವು ಕೊಡಗಿನ ಅಂತಿಮ ಬೋಡ್ಹಬ್ಬ ಎಂದೆನ್ನುತ್ತಾರೆ. ಅಂಬಲದಲ್ಲಿ ವೇಷಧಾರಿಗಳು ವಿವಿಧ ವೇಷಧರಿಸಿ ಮನೆಮನೆಗೆ ತೆರಳುವರು. ಇಲ್ಲಿನ ಹಲವು ಇತಿಹಾಸದ ಕಥೆಯಂತೆ ಈಶ್ವರನ ಹಾಗೂ ಭಸ್ಮಾಸುರನನ್ನು ಭಸ್ಮಮಾಡಲು ಸೃಷ್ಟಿಸಿದ ವಿಷ್ಣುದೇವನು ಕೊಟ್ಟ ವರವನ್ನು ವಾಪಾಸು ಪಡೆಯಲು ಸಾಧ್ಯವಿಲ್ಲವೆಂದಾಗ ಕುದುರೆ ಆನೆಯಾಗವನ್ನು ಮಾಡಿ ಭಸ್ಮಾಸುರನನ್ನು ಸಂಹಾರ ಮಾಡಿದನೆಂಬ ಕಾರಣಕ್ಕಾಗಿ ವಿವಿಧ ವೇಷಗಳೊಂದಿಗೆ ಹೊರಟು ಬೇರಳಿನಾಡಿನವರು ಪಾರಣಮಾನಿ ಎಂಬಲ್ಲಿ ಬಿದಿರಿನ ಕುದುರೆ ಹಾಗೂ ಆನೆಯನ್ನು ಕಡಿದು ದೇವರಿಗೆ ಆಹುತಿ ನೀಡಲಾಗುತ್ತದೆ.
ತಲತಲಾಂತರದಿAದ ಕಾಡಿನ ವನಸಂಪತ್ತಿನ ರಕ್ಷಣೆಯ ಉದ್ದೇಶದಿಂದ ಕೊಡಗಿನ ಬುಡಕಟ್ಟು ಜನಾಂಗದವರು ವಿಶಿಷ್ಟ ಮಾದರಿಯಲ್ಲಿ ಬೋಡ್ನಮ್ಮೆಯನ್ನು ಆಚರಿಸುತ್ತಾರೆ. ಹರಕೆಹೊತ್ತ ವೇಷಧಾರಿಗಳು ಹಾಗೂ ಭಕ್ತರು ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ತಾಳ ಮೇಳ ಮಾಡಿ ಕುಂಡೆ ಹಿಡಿದು ಕುಲುಕುತ್ತಾ ಅಶ್ಲೀಲವಾಗಿ ಹಾಡುತ್ತಾ, ಬೈಯುತ್ತಾ ಹಣ ಬೇಡುವರು. ದೇವಾಲಯದ ಮುಂದಿರುವ ಆಲ ಹಾಗೂ ಗೋಣಿಮರದ ಸುತ್ತ ತಾಳಮೇಳಗಳೊಂದಿಗೆ ಕುಣಿದು ಬೇಡಿದ ಹಣವನ್ನು ಭದ್ರಕಾಳಿ ದೇವಾಲಯದ ಹುಂಡಿಗೆ ಹಾಕಿ ಹರಕೆ ಒಪ್ಪಿಸುವರು. ಕಾಡುಸೋರೆ (ಕುಂಡೆ)ಯನ್ನು ಹಿಡಿದು ಕುಣಿಯುವುದರಿಂದ ಕುಂಡೆಹಬ್ಬವೆAದೂ ಕರೆಯುವರು. ದೇವಾಲಯದ ತಕ್ಕಮುಖ್ಯಸ್ಥರು ಹಲವು ಸಾಂಪ್ರದಾಯಿಕ ಪೂಜಾ ಕೈಂಕರ್ಯವನ್ನು ಸಲ್ಲಿಸಿ ಹಬ್ಬಕ್ಕೆ ತೆರೆ ಎಳೆಯುವರು.
ದಕ್ಷಿಣ ಕೊಡಗಿನ ಹಲವೆÀಡೆ ಹೆಚ್ಚಾಗಿ ಕಂಡುಬರುವ ಬೋಡ್ಹಬ್ಬದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆದ ಕುಂದತ್ಬೊಟ್ಟ್ ಬೋಡ್ಹಬ್ಬ ಹಾಗೂ ಒಂದೆರೆಡು ಬೋಡ್ನಮ್ಮೆ ಬಿಟ್ಟರೆ ಕೊರೊನಾದಿಂದಾಗಿ ಬೇರೆಲ್ಲೂ ನಡೆಯಲಿಲ್ಲ. ಇಂತಹ ಕೊಡಗಿನ ಸಾಂಪ್ರದಾಯಿಕ ವಿಶಿಷ್ಟ ಆಚರಣೆಯಲ್ಲೊಂದಾದ ಇಂತಹ ಬೋಡ್ಹಬ್ಬದ ಆಚರಣೆಗೆ ಕೊರಾನಾ ಭೀತಿ ಅಡ್ಡಿಯಾಗಿದ್ದು, ಮುಂದಿನ ಹಬ್ಬದ ಆಚರಣೆಗೂ ಇನ್ನೆಷ್ಟು ವರ್ಷ ಕಾಡಲಿದೆಯೋ?
- ಪುತ್ತರಿರ ಕರುಣ್ ಕಾಳಯ್ಯ