ವೀರಾಜಪೇಟೆ, ಮೇ ೨೭: ಸರಕಾರ ಲಾಕ್ಡೌನ್ ವಿಸ್ತರಿಸಿರುವ ನಿಗದಿತ ಅವಧಿಗಿಂತ ಮುನ್ನವೇ ಸೋಂಕು ಮುಕ್ತ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದರು.
ವೀರಾಜಪೇಟೆ ಬಳಿಯ ಬೇಟೋಳಿ ವಿ.ಎಸ್.ಎಸ್.ಎನ್. ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬೇಟೋಳಿ ಹಾಗೂ ಆರ್ಜಿ ಗ್ರಾಮ ಪಂಚಾಯಿತಿಯ ಕೊರೊನಾ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಲಾಕ್ಡೌನ್ಅನ್ನು ಕೆಲವರು ಗಂಭೀರವಾಗಿ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವು ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಾರದಲ್ಲಿ ಮೂರುದಿನ ಬೆಳಿಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗುವುದು. ಇದರಿಂದ ಜನದಟ್ಟಣೆ ಇಲ್ಲದೆ ಪಡಿತರವನ್ನು ಪಡೆದುಕೊಳ್ಳಬಹುದು. ಪಟ್ಟಣದಲ್ಲಿ ರಸಗೊಬ್ಬರ ಖರೀದಿಸುವವರು ವಾರದ ಮೂರು ದಿನ ಬೆಳಿಗ್ಗೆ ೬ ರಿಂದ ೧೦ ರೊಳಗೆ ರಶೀದಿ ಮಾಡಿಸಿಕೊಂಡು ಅದೇ ದಿನ ಉಳಿದ ಅವಧಿಯಲ್ಲಿ ರಸಗೊಬ್ಬರ ಸಾಗಿಸಲು ಅವಕಾಶ ನೀಡಲಾಗು ವುದು. ಕೊರೊನಾ ಸೋಂಕಿತರು ಹಾಗೂ ಅದರ ಪರೀಕ್ಷೆಗೊಳಪಟ್ಟವರು ವರದಿ ಬರುವ ಮುನ್ನ ಮನೆಯಿಂದ ಹೊರ ಬರಬಾರದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಆರ್. ಯೋಗಾನಂದ ಮಾತನಾಡಿ, ದಾನಿಗಳು ಸೋಂಕಿತರಿಗೆ ನೇರವಾಗಿ ಕಿಟ್ ನೀಡದೆ, ಕೊರೊನಾ ವಾರಿಯರ್ಸ್ ಮೂಲಕ ನೀಡಬೇಕು. ನಿರ್ಬಂಧ ಸಡಿಲಿಕೆಯ ಅವಧಿಯಲ್ಲಿ ವಹಿವಾಟು ನಡೆಸುವ ಪ್ರತಿಯೊಬ್ಬ ವರ್ತಕರು ಹಾಗೂ ಕೆಲಸಗಾರರು ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ತಪ್ಪಿದಲ್ಲಿ ಅಂಗಡಿಗಳ ಲೈಸನ್ಸ್ ರದ್ದು ಪಡಿಸಲಾಗುವುದು ಎಂದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ. ಮಹೇಶ್ ಗಣಪತಿ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷೆ ಶಾಂತಿ, ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಪೇಂದ್ರ, ಜಿಲ್ಲಾ ಲೆಕ್ಕಪತ್ರ ಅಧಿಕಾರಿ ಪುಷ್ಪವತಿ, ಸಿಪಿಐ ಬಿ.ಎಸ್. ಶ್ರೀಧರ್, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಮನು ರಾಮಚಂದ್ರ, ಪಂಚಾಯಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.