ವೀರಾಜಪೇಟೆ, ಮೇ ೨೭: ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಇಳಿಮುಖಗೊಳ್ಳುತ್ತಿದ್ದು, ಆರೋಗ್ಯ ಇಲಾಖಾ ಪ್ರತಿನಿಧಿಗಳು, ಚುನಾಯಿತ ಜನಪ್ರತಿನಿಧಿಗಳು, ಅಧ್ಯಾಪಕರುಗಳು, ಆಶಾ ಕಾರ್ಯಕರ್ತರುಗಳ ಕೆಲಸ ಶ್ಲಾಘನೀಯ. ಸೋಂಕಿತರು ಮತ್ತು ಸಾರ್ವಜನಿಕರು ಟಾಸ್ಕ್ಫೋರ್ಸ್ ನೊಂದಿಗೆ ಸಹಕರಿಸಿ ಕೊರೊನಾ ಮುಕ್ತ ತಾಲೂಕಾಗಿ ಪರಿವರ್ತಿಸಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕಾಕೋಟುಪರಂಬು ಪ್ರೌಢಶಾಲಾ ಸಭಾಂಗಣದಲ್ಲಿ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವಾರು ಕಡೆಗಳಲ್ಲಿ ಸೋಂಕಿತರು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವ ದೂರುಗಳು ಬಂದಿದ್ದು, ಅಂತವರಿAದ ಉಳಿದವರಿಗೂ ರೋಗ ಹರಡುತ್ತಿದೆ. ಗಂಟಲು ದ್ರವ ಪರೀಕ್ಷೆ ನೀಡಿದ ಮೇಲೆ ವರದಿ ಬರುವವರೆಗೆ ಮನೆಯಲ್ಲಿಯೆ ಇರಬೇಕು. ಇನ್ನು ಮುಂದೆ ಸೋಂಕಿತರು ಯಾರೇ ಆದರೂ ಮನೆಯಲ್ಲಿ ಐಸೋಲೇಶನ್ನಲ್ಲಿರದೆ ಕೋವಿಡ್ ಹೆಲ್ತ್ಕೇರ್ ಸೆಂಟರ್ಗೆ ದಾಖಲಾಗಿ ಅಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾರ್ವಜನಿಕರು ಸಹಕಾರ ನೀಡಿದರೆ ಆದಷ್ಟು ಬೇಗ ಸೋಂಕನ್ನು ಹೋಗಲಾಡಿಸಬಹುದು ಎಂದು ಹೇಳಿದರು.
ಕಾಕೋಟುಪರಂಬು ನ್ಯಾಯಬೆಲೆ ಅಂಗಡಿಯಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಅಕ್ಕಿ ಬಂದಿದ್ದರೂ ವಿತರಿಸಲು ಈವರೆಗೆ ಇಲಾಖೆಯಿಂದ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ ಎಂದು ಗ್ರಾಮಸ್ಥ ಚಂಬಾAಡ ಅಪ್ಪಚ್ಚು ಸಭೆಗೆ ತಿಳಿಸಿದಾಗ ಶಾಸಕರು ನೇರವಾಗಿ ಅಧಿಕಾರಿಗೊಂದಿಗೆ ಮಾತನಾಡಿ, ಕೆಲವು ಕಡೆಗಳಲ್ಲಿ ಸರ್ವರ್ ಇಲ್ಲದ ಕಾರಣ ಒಟಿಪಿ ಬರುವುದಿಲ್ಲ.
ನ್ಯಾಯಬೆಲೆ ಅಂಗಡಿಗಳಲ್ಲಿ ಹೆಬ್ಬೆಟ್ಟು ಗುರುತು ಅಥವಾ ಒಟಿಪಿಗೆ ಕಾಯುವ ಅಗತ್ಯತೆ ಇಲ್ಲ. ಪಡಿತರ ಚೀಟಿದಾರರಿಗೆ ಕೂಡಲೇ ಪಡಿತರ ವಿತರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಆದೇಶ ನೀಡಿದರು.
ಸದಸ್ಯೆ ಮೇವಡ ವಸ್ಮಾ ಮಾತನಾಡಿ, ಕಾಕೋಟುಪರಂಬು ಜಂಕ್ಷನ್ನಲ್ಲಿ ಪಾಸಿಟಿವ್ ಬಂದವರು, ಹೋಮ್ ಕ್ವಾರಂಟೈನ್ನಲ್ಲಿರುವವರು ಮತ್ತು ಸಾರ್ವಜನಿಕರು ಅನವಶ್ಯಕವಾಗಿ ಅಡ್ಡಾಡುತ್ತಿರುತ್ತಾರೆ. ಅದನ್ನು ತಡೆಗಟ್ಟಬೇಕು ಎಂದು ಸಭೆಗೆ ತಿಳಿಸಿದಾಗ, ಜನರು ಗುಂಪು ಸೇರುವುದು ಅಪರಾಧವಾಗಿದೆ. ಆದ್ದರಿಂದ ಟಾಸ್ಕ್ಫೋರ್ಸ್ ತಂಡಕ್ಕೆ ದೂರವಾಣಿ ಮೂಲಕ ದೂರು ನೀಡಿ ಮುಂದಿನದು ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ತಹಶೀಲ್ದಾರ್ ಆರ್. ಯೋಗಾನಂದ್ ಮಾತನಾಡಿ, ಕೃಷಿ ಚಟುವಟಿಕೆ ನಡೆಸುವವರು ಬೆಳಿಗ್ಗೆ ೮.೩೦ ರೊಳಗೆ ತೋಟ ಅಥವಾ ಗದ್ದೆಗಳಿಗೆ ತೆರಳಬೇಕು. ಸಂಜೆ ೫.೩೦ ರ ನಂತರವೇ ತಮ್ಮ ಮನೆಗಳಿಗೆ ತೆರಳುವಂತಾಗಬೇಕು.
ಈ ಸಮಯಗಳ ಮಧ್ಯದಲ್ಲಿ ಕಂಡು ಬಂದರೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳ ಲಾಗುವುದು. ವಾಹನದಲ್ಲಿ ಶೇ. ೫೦ ರಷ್ಟು ಮಾತ್ರ ಜನರನ್ನು ಕೊಂಡೊಯ್ಯಲು ಅವಕಾಶ ಇದೆ. ರಸಗೊಬ್ಬರ ತೆಗೆದುಕೊಳ್ಳುವವರಿಗೆ ಸರ್ಕಾರ ನಿಗದಿಪಡಿಸಿದ ಮೂರು ದಿನಗಳಲ್ಲಿ ಪೂರ್ವಾಹ್ನ ೧೦ ಗಂಟೆಯ ಒಳಗೆ ಚೀಟಿ ಮಾಡಿಸಿಕೊಂಡು ಸಂಜೆ ೫ ಗಂಟೆಯವರೆಗೆ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ಇದೆ ಎಂದು ಹೇಳೀದರು.
ಕಾಕೋಟುಪರಂಬು ಪಿಡಿಒ ದೀಪಾ ಮಾಹಿತಿ ನೀಡಿ ಕಾಕೋಟುಪರಂಬು ವ್ಯಾಪ್ತಿಯಲ್ಲಿ ೧೧೮ ಸಕ್ರಿಯ ಪ್ರಕರಣಗಳಿದ್ದು, ೯೧ ಜನರು ಗುಣಮುಖರಾಗಿದ್ದಾರೆ. ೨೭ ಜನರು ಹೋಂ ಐಸೋಲೇಶನ್ನಲ್ಲಿದ್ದಾರೆ. ೫೬ ಜನರದು ನೆಗೆಟಿವ್ ಬಂದಿದೆ. ೪ ಜನರು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೩ ಜನರು ಮರಣ ಹೊಂದಿದ್ದಾರೆ. ೧೮೬೭ ಜನರಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್, ತಾಲೂಕು ಕೋವಿಡ್ ಅಧಿಕಾರಿ ಲಕ್ಷಿö್ಮ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ, ವೃತ್ತ ನಿರೀಕ್ಷಕ ಶ್ರೀಧರ್ ಉಪಸ್ಥಿತರಿದ್ದರು.