ಕೂಡಿಗೆ, ಮೇ ೨೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಉದ್ದೀನಮಂಟಿಯ ನೇತ್ರಾವತಿ ಎಂಬವರಿಗೆ ಸೇರಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನೆಡೆದಿದೆ.
ಉದ್ದೀನಮಂಟಿಯ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಬೆಳಿಗ್ಗೆ ೮ ಗಂಟೆಯ ಸಮಯದಲ್ಲಿ ಕಟ್ಟಿಹಾಕಲಾಗಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕುತ್ತಿಗೆಯ ಭಾಗವನ್ನು ಕಚ್ಚುತ್ತಿದ್ದ ಸಂದರ್ಭದಲ್ಲಿ ಮನೆಯವರು ನೋಡಿ ಕಿರುಚಿದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಚಿರತೆಯು ಹಸುವನ್ನು ಗಾಯಗೊಳಿಸಿದ ಸುದ್ದಿಯನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು. ಗಾಯಗೊಂಡ ಹಸುವಿಗೆ ವೈದ್ಯರು ಚಿಕಿತ್ಸೆ ನೀಡಿದರು.
ಕಳೆದ ಒಂದು ವಾರಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ. ಚಿರತೆ ಹಗಲಿನಲ್ಲಿ ಗ್ರಾಮಗಳತ್ತ ಬರುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿರುತ್ತಾರೆ.
ಸ್ಥಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಭರತ್, ಅರಣ್ಯ ರಕ್ಷಕ ಲೋಕೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಆಗಮಿಸಿದ್ದರು.