ಸಿದ್ದಾಪುರ, ಮೇ ೨೫: ಮಾಲ್ದಾರೆ ಚೆಕ್‌ಪೋಸ್ಟ್ ಮುಖಾಂತರ ಅನಗತ್ಯವಾಗಿ ಓಡಾಡುವ ವಾಹನ ಗಳಿಗೆ ಕಡಿವಾಣ ಹಾಕಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಪೊಲೀಸರಿಗೆ ಸೂಚನೆ ನೀಡಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳುವ ವಾಹನಗಳು ಅನುಮತಿ ಪಡೆದು ಸಂಚರಿಸಬೇಕು ಹೊರತು ಅನಗತ್ಯ ವಾಗಿ ಸಂಚರಿಸುವ ವಾಹನಗಳನ್ನು ಚೆಕ್‌ಪೋಸ್ಟ್ನಲ್ಲಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ತಿಳಿಸಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡದಂತೆ ಪಂಚಾಯಿತಿಯ ಸದಸ್ಯರುಗಳು ಹಾಗೂ ಟಾಸ್ಕ್ಫೋರ್ಸ್ ಸಮಿತಿಯವರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಿದರು. ಕೊರೊನಾ ವೈರಸ್ ಪತ್ತೆಯಾದ ಕುಟುಂಬಗಳಿಗೆ ದಾನಿಗಳ ನೆರವು ಪಡೆದು ಅಗತ್ಯ ವಸ್ತುಗಳನ್ನು ನೀಡುವಂತೆ ತಿಳಿಸಿದರು.

ಆರೋಗ್ಯ ಇಲಾಖಾಧಿಕಾರಿಗಳು ಗ್ರಾಮಸ್ಥರಿಗೆ ಅಗತ್ಯವಾದ ಕ್ರಮಗಳನ್ನು ವಹಿಸಬೇಕು ಹಾಗೂ ಸಿಬ್ಬಂದಿಗಳು ಕೊರತೆ ಇದ್ದಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಂತೆ ತಿಳಿಸಿದರು. ಯಾವುದೇ ಸಮಸ್ಯೆ ಗಳಿದ್ದರೆ ತನ್ನನ್ನು ಅಥವಾ ತಾಲೂಕು ತಹಶೀಲ್ದಾರ್‌ರವರನ್ನು ದೂರವಾಣಿ ಮೂಲಕ ಸಂಪರ್ಕಿಸುವAತೆ ಹಾಗೂ ಮಾಹಿತಿ ನೀಡುವಂತೆ ತಿಳಿಸಿದರು.

ವಾರಕ್ಕೆ ಒಂದು ಬಾರಿ ಸರಕಾರಿ ಆಸ್ಪತ್ರೆಗಳಿಗೆ ತಾಲೂಕು ವೈದ್ಯಾಧಿಕಾರಿ ಭೇಟಿ ನೀಡುವಂತೆ ಹೇಳಿದರು. ಗ್ರಾಮಸ್ಥರಿಗೆ ಅಗತ್ಯವಾದ ವಿಟಮಿನ್ ಸಿ ಮಾತ್ರೆಗಳನ್ನು ಅಧಿಕವಾಗಿ ಆಸ್ಪತ್ರೆಗಳ ಮುಖಾಂತರ ವಿತರಿಸುವಂತೆ ಬೋಪಯ್ಯ ಸೂಚನೆ ನೀಡಿದರು. ಗ್ರಾಮಸ್ಥರು ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಮಾತನಾಡಿ, ವಾರದಲ್ಲಿ ಮೂರು ದಿನ ಬೆಳಗ್ಗಿನಿಂದ ಸಂಜೆ ೫ ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ತಿಳಿಸಲಾಗಿದೆ ಎಂದರು. ಪಡಿತರ ಸಾಮಗ್ರಿಗಳನ್ನು ಗ್ರಾಮಸ್ಥರು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದ ಬಡ ಕುಟುಂಬಗಳ ಪಟ್ಟಿಯನ್ನು ತಯಾರಿಸಿ ಕಳುಹಿಸಿಕೊಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ಕೊರೊನಾ ವೈರಸ್ ಪತ್ತೆಯಾದ ಹೋಂ ಐಸೋಲೇಷನ್‌ನಲ್ಲಿ ಇರಬೇಕು. ಇಂತಹ ವ್ಯಕ್ತಿಗಳು ಮನೆಯಿಂದ ಹೊರ ಬರದಂತೆ ಟಾಸ್ಕ್ಫೋರ್ಸ್ ಸಮಿತಿ ನಿಗಾವಹಿಸಬೇಕು. ಒಂದು ವೇಳೆ ಅಂತಹ ವ್ಯಕ್ತಿಗಳು ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರ ವಿರುದ್ಧ ಏನಾದರೂ ತೊಂದರೆ ಮಾಡಿದ್ದಲ್ಲಿ ಹಾಗೂ ತಕರಾರು ಮಾಡಿದರೇ ಕೂಡಲೇ ಅವರ ವಿರುದ್ಧ ಪೊಲೀಸ್ ಪುಕಾರು ನೀಡಿ ಮೊಕದ್ದಮೆಯನ್ನು ದಾಖಲಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಉಪಾಧ್ಯಕ್ಷೆ ಪುಷ್ಪ, ಪಿಡಿಓ ಅನಿಲ್ ಕುಮಾರ್, ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತೀರಾಜ್, ಐಟಿಡಿಪಿ ಅಧಿಕಾರಿ ಶಿವಕುಮಾರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್, ಟಾಸ್ಕ್ಫೋರ್ಸ್ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರುಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮಗೆ ೨ ತಿಂಗಳಿನಿAದ ವೇತನ ಲಭಿಸಿರುವುದಿಲ್ಲ ವೆಂದು ಶಾಸಕ ಬೋಪಯ್ಯ ಅವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಶಾಸಕರು ಆರೋಗ್ಯ ಇಲಾಖಾಧಿಕಾರಿಗಳ ಮುಖಾಂತರ ಕೂಡಲೇ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.