ಮಡಿಕೇರಿ, ಮೇ ೨೫: ಕೋವಿಡ್ ೧೯ ಅಲೆ ಎಲ್ಲೆಡೆ ದೊಡ್ಡ ಆತಂಕವನ್ನೇ ಸೃಷ್ಟಿಮಾಡಿದೆ. ಕರ್ನಾಟಕ ರಾಜ್ಯ ಕೋವಿಡ್ ಸೋಂಕಿತರ ಪೈಕಿ ಮೊದಲನೇ ಸ್ಥಾನಕ್ಕೆ ತಲಪಿದೆ. ನಮ್ಮ ಕೊಡಗು ಜಿಲ್ಲೆಯಲ್ಲೂ ಕೋವಿಡ್ ಅಲೆ ವ್ಯಾಪಕವಾಗಿ ಹರಡಿ ಸಾಕಷ್ಟು ಸಾವು-ನೋವುಗಳೊಂದಿಗೆ ರಾಜ್ಯದಲ್ಲೇ ಪ್ರಥÀಮ ಸ್ಥಾನ ಪಡೆದುಕೊಂಡಿತ್ತು. ಈ ಸೋಂಕನ್ನು ನಿವಾರಿಸುವ ಸಲುವಾಗಿ ಸರಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತ ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ನಿಯಮಗಳನ್ನು ಜಾರಿಗೆ ತಂದಿತು. ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರಿಂದ ಸೋಂಕು ಹರಡುತ್ತಿದೆ ಎಂಬ ದೂರುಗಳು ಬರಲಾರಂಭಿಸಿದ ನಂತರ ಜನತಾ ಕರ್ಫ್ಯೂ, ಲಾಕ್‌ಡೌನ್ ಹೀಗೇ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಆದರೂ ಜನರ ಓಡಾಟ, ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವವರನ್ನು ಗುರುತಿಸಿ ಅವರುಗಳಿಗೆ ಸೀಲ್ ಹಾಕಿ ೧೪ ದಿವಸಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿರಿಸಲು ಕ್ರಮ ಜರುಗಿಸಲಾಯಿತು. ಗಡಿಭಾಗದ ಗೇಟ್‌ಗಳಲ್ಲಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಹೊರಗಿನಿಂದ ಬಂದವರನ್ನು ಪತ್ತೆಹಚ್ಚಿ ಸೀಲ್ ಮಾಡಲಾಗುತ್ತಿದ್ದು, ಇದುವರೆಗೆ ಜಿಲ್ಲೆಯಲ್ಲಿ ಹೊರಗಡೆಯಿಂದ ಬಂದಿರುವ ೨೧೭೨ ಮಂದಿಯನ್ನು ಗುರುತಿಸಿ ಅವರುಗಳಿಗೆ ಗೃಹಸಂಪರ್ಕ ತಡೆ ಮಾಡಲಾಗಿದೆ. ಈ ಪೈಕಿ ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಮಂದಿ ಇದ್ದಾರೆ.

ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಾದ ಬಳಿಕ ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರನ್ನು ಗಡಿಭಾಗದಲ್ಲಿ ಪರಿಶೀಲಿಸಿ ಅವರುಗಳ ಕೈಗಳಿಗೆ ಸೀಲ್ ಹಾಕಿ ೧೪ ದಿವಸಗಳ ಕಾಲ ಮನೆಯಿಂದ ಹೊರಬಾರದಂತೆ ಗೃಹಸಂಪರ್ಕ ತಡೆಯಲ್ಲಿರುವಂತೆ ಸೂಚನೆ ನೀಡಿ ಕಳುಹಿಸಲಾಗುತ್ತಿತ್ತು. ಆದರೆ, ಬಸ್ಸು, ಇನ್ನಿತರ ಸಾರ್ವಜನಿಕ ಸಂಪರ್ಕ ಸಾಧನಗಳಲ್ಲಿ ಬರುವವರ ಬಗ್ಗೆ ಮಾಹಿತಿ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಕರುಗಳ ಸೂಚನೆ ಮೇರೆಗೆ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪಂಚಾಯತ್ ಮೂಲಕ ಹಾಗೂ ನಗರ ಮತ್ತು ಪಟ್ಟಣಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಅಂತಹವರನ್ನು ಪತ್ತೆಹಚ್ಚಿ ಗೃಹ ಸಂಪರ್ಕ ತಡೆಯಲ್ಲಿರಿಸಲು ಕ್ರಮ ಕೈಗೊಳ್ಳಲಾಗಿದೆ.

ಅಭಿವೃದ್ಧಿ ಅಧಿಕಾರಿಗಳ ಶ್ರಮ

ಹೊರ ಜಿಲ್ಲೆ, ರಾಜ್ಯಗಳಿಂದ ಜಿಲ್ಲೆಯ ಗಡಿ ಗೇಟ್‌ಗಳ ಮೂಲಕ ಬರುವವರನ್ನು ಗೇಟ್‌ನಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿ, ಸಿಬ್ಬಂದಿಗಳು ಸೀಲ್ ಮಾಡಿ ಪ್ರಯಾಣಿಕರು ನೀಡುವ ವಿಳಾಸಕ್ಕೆ ಕಳುಹಿಸುತ್ತಾರೆ. ಆದರೆ ಬಹುತೇಕರು ಸರಿಯಾದ ವಿಳಾಸ ನೀಡದೆ, ಮಡಿಕೇರಿ, ಸೋಮವಾರಪೇಟೆ, ಹೀಗೇ ಪಟ್ಟಣಗಳ ವಿಳಾಸಗಳನ್ನು ನೀಡಿ ಗ್ರಾಮೀಣ ಪ್ರದೇಶದಲ್ಲಿ ಹೋಗಿ ಸೇರಿಕೊಳ್ಳುತ್ತಾರೆ. ಇಂತಹವರನ್ನು ಪತ್ತೆಹಚ್ಚುವದು ಕಷ್ಟಕರ ಕೆಲಸವಾದ್ದರಿಂದ ಜಿ.ಪಂ.ವತಿಯಿAದ ಎಲ್ಲ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಸೇರಿದಂತೆ ಕಾರ್ಯಪಡೆಯನ್ನು

(ಮೊದಲ ಪುಟದಿಂದ) ರಚಿಸಲಾಗಿದ್ದು, ಅವರುಗಳ ಮೂಲಕ ಮನೆ ಮನೆಗಳಿಗೆ ತೆರಳಿ ಹೊರಗಿನಿಂದ ಬಂದವರನ್ನು ಪತ್ತೆ ಹಚ್ಚಿ ಅವರುಗಳಿಗೆ ಸೀಲ್ ಹಾಕಿ ಗೃಹ ಸಂಪರ್ಕ ತಡೆಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ಗೃಹ ಸಂಪರ್ಕ ತಡೆಯಲ್ಲಿರುವವರು ನಿಯಮ ಉಲ್ಲಂಘಿಸಿದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದು, ಗ್ರಾಮಾಂತರ ವಿಭಾಗದಲ್ಲಿ ಸಾವಿರಾರು ಮಂದಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯದ ಜವಾಬ್ದಾರಿ ಜಿಲ್ಲಾ ಉಪಕಾರ್ಯದರ್ಶಿ ಲಕ್ಷಿö್ಮ ಅವರದ್ದಾಗಿದೆ.

ಗ್ರಾಮದಲ್ಲಿ ೨೦೭೬: ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರ ಪೈಕಿ ಗ್ರಾಮೀಣ ಭಾಗದವರೇ ಹೆಚ್ಚಾಗಿದ್ದಾರೆ. ಮುಂಬೈ, ರಾಜಸ್ಥಾನ್, ಪಂಜಾಬ್ ಮುಂತಾದೆಡೆಗಳಿAದ ಬಂದವರೂ ಇದ್ದಾರೆ. ಈ ಪೈಕಿ ಸೇನೆಯಲ್ಲಿರುವವರೂ ಸೇರಿದ್ದಾರೆ. ಅದರಲ್ಲೂ ನೆರೆಯ ಕೇರಳ ರಾಜ್ಯದಿಂದ ಬಂದವರೇ ಹಚ್ಚಿನವರಾಗಿದ್ದಾರೆ. ಒಟ್ಟು ೨೦೭೬ ಮಂದಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಗ್ರಾಮೀಣ ಪ್ರದೇಶದಲ್ಲಿ ಗೃಹ ಸಂಪರ್ಕ ತಡೆಗೆ ಒಳಗಾಗಿದ್ದಾರೆ.

ಹೊರ ರಾಜ್ಯದಿಂದ ಬಂದವರ ಪೈಕಿ ಮಡಿಕೇರಿ ತಾಲೂಕಿನಲ್ಲಿ ೩೩ ಪುರುಷರು, ೬ ಮಹಿಳೆಯರು ಸೇರಿ ೩೯ ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ ೮೨ ಪುರುಷರು, ೫೬ ಮಹಿಳೆಯರು ಸೇರಿ ೧೩೮, ವೀರಾಜಪೇಟೆ ತಾಲೂಕಿನಲ್ಲಿ ೧೦೯ ಪುರುಷರು, ೧೦೭ ಮಹಿಳೆಯರು ಸೇರಿ ೨೧೬ ಮಂದಿ ಸೇರಿದಂತೆ ಒಟ್ಟು ೩೯೩ ಮಂದಿಯನ್ನು ಗೃಹ ಸಂಪರ್ಕ ತಡೆಮಾಡಲಾಗಿದೆ.

ಹೊರ ಜಿಲ್ಲೆಯಿಂದ ಬಂದವರ ಪೈಕಿ ಮಡಿಕೇರಿ ತಾಲೂಕಿನಲ್ಲಿ ೧೫೩ ಪುರುಷರು, ೮೩ ಮಹಿಳೆಯರು ಸೇರಿ ೨೩೬ ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ ೬೧೫ ಪುರುಷರು, ೩೯೪ ಮಹಿಳೆಯರು ಸೇರಿ ೧೦೦೯, ವೀರಾಜಪೇಟೆ ತಾಲೂಕಿನಲ್ಲಿ ೨೩೮ ಪುರುಷರು, ೨೦೦ಮಹಿಳೆಯರು ಸೇರಿ ೪೩೮ ಮಂದಿ ಸೇರಿದಂತೆ ಒಟ್ಟು ೧೬೮೩ ಮಂದಿಯನ್ನು ಗೃಹಸಂಪರ್ಕ ತಡೆಗೆ ಒಳಪಡಿಸಲಾಗಿದೆ.

ನಗರ-ಪಟ್ಟಣ: ಮಡಿಕೇರಿ ನಗರಸಭೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲೂ ಹೊರಗಿನಿಂದ ಬಂದವರನ್ನು ಗುರುತಿಸಿ ಸಂಪರ್ಕ ತಡೆ ಮಾಡಲಾಗಿದೆ. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು ೧೬ ಮಂದಿಯನ್ನು ಗುರುತಿಸಿ ಸೀಲ್ ಹಾಕಿ ಸಂಪರ್ಕ ತಡೆ ಮಾಡಲಾಗಿದೆ. ಸಂಪಾಜೆ ಗಡಿ ಮೂಲಕ ಪ್ರವೇಶಿಸುವವರನ್ನು ಗುರುತಿಸಿ ಸೀಲ್ ಹಾಕಲಾಗಿದೆ. ಬಹುತೇಕರು ಗಡಿಯಲ್ಲಿ ಮಡಿಕೇರಿ ಎಂದು ವಿಳಾಸ ಕೊಡುತ್ತಿದ್ದು, ಅವರುಗಳು ನಗರಕ್ಕೆ ಬಾರದೆ ಗ್ರಾಮಗಳಿಗೆ ಹೋಗುತ್ತಾರೆ ಅದರಿಂದಾಗಿ ಗಡಿಯಲ್ಲಿ ದಾಖಲಾಗುವಷ್ಟು ಮಂದಿ ನಗರದಲ್ಲಿ ಸಿಗುವದಿಲ್ಲ. ಗಡಿಯಲ್ಲಿ ಸರಿಯಾದ ವಿಳಾಸ ಪಡೆಯುವಂತಾಗಬೇಕೆAದು ಈ ಕಾರ್ಯದ ಉಸ್ತುವಾರಿ ಹೊತ್ತಿರುವ ಶಶಿಕುಮಾರ್ ತಿಳಿಸಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ೬ ಪುರುಷರು ಹಾಗೂ ೫ ಮಹಿಳೆಯರು ಸೇರಿದಂತೆ ೧೧ ಮಂದಿಯನ್ನು ಗುರುತಿಸಿ ಸೀಲ್ ಹಾಕಲಾಗಿದೆ. ಸಂಪರ್ಕ ತಡೆಯಲ್ಲಿರುವವರ ಬಗ್ಗೆ ಮಾಹಿತಿ ಪಡೆಯುವ ಕೆಲಸ ಆಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ. ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಬಂದ ೧೦ ಹಾಗೂ ಹೊರಜಿಲ್ಲೆಯಿಂದ ಬಂದ ೧೭ ಮಂದಿ ಸೇರಿದಂತೆ ಒಟ್ಟು ೨೭ ಮಂದಿಯನ್ನು ಗೃಹ ಸಂಪರ್ಕ ತಡೆಯಲ್ಲಿರಿಸಲಾಗಿದೆ. ಇನ್ನೂ ಕೂಡ ಪತ್ತೆ ಹಚ್ಚಲಾಗುತ್ತಿದ್ದು, ತಡೆಯಲ್ಲಿರುವವರ ಯೋಗಕ್ಷೇಮ ವಿಚಾರಿಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಶ್ರಿಧರ್ ಮಾಹಿತಿ ನೀಡಿದರು. ಕುಶಾಲನಗರ ವ್ಯಾಪ್ತಿಯಲ್ಲಿ ಒಟ್ಟು ೪೨ ಮಂದಿಯನ್ನು ಪತ್ತೆಹಚ್ಚಿ ಸಂಪರ್ಕತಡೆಯಲ್ಲಿರಿಸಲಾಗಿದೆ. ಪ್ರಮುಖ ಹೆದ್ದಾರಿ ಹಾದುಹೋಗುವ ಪಟ್ಟಣ ಇದಾಗಿದ್ದು, ಇನ್ನೂ ಕೂಡ ಪತ್ತೆ ಹಚ್ಚುವ ಕಾರ್ಯವಾಗುತ್ತಿದೆ ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾಹಿತಿ ನೀಡಿದ್ದಾರೆ.

ಹೆಚ್ಚಾಗುವ ಸಾಧ್ಯತೆ: ಲಾಕ್‌ಡೌನ್ ಅವಧಿಯಲ್ಲಿ ಈವರೆಗೆ ಸೀಲ್ ಮಾಡಿ ಗೃಹ ಸಂಪರ್ಕ ತಡೆಯಲ್ಲಿದ್ದವರ ಪೈಕಿ ಬಹುತೇಕರ ಸಂಪರ್ಕ ತಡೆ ಅವಧಿ ಮುಗಿದಿದೆ. ಆದರೂ ಹೊರಗಿನಿಂದ ಬರುವವರ ಸಂಖ್ಯೆ ಏನೂ ಇಳಿಕೆಯಾಗಿಲ್ಲ. ಇದೀಗ ಮತ್ತೂ ಎರಡು ವಾರ ಲಾಕ್‌ಡೌನ್ ಅವಧಿ ವಿಸ್ತರಣೆಯಾಗಿದ್ದು, ಹೊರಗಿನಿಂದ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮದಿಂದಾಗಿ ಒಂದಷ್ಟು ಸೋಂಕು ಹರಡುವದು ಕಡಿಮೆಯಾಗಿದೆ ಎನ್ನಬಹುದು. ಇಲ್ಲವಾದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಂಭವವಿತ್ತು.

-ಕುಡೆಕಲ್ ಸಂತೋಷ್