ಸೋಮವಾರಪೇಟೆ, ಮೇ ೨೫: ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂಘದ ಸದಸ್ಯರ ನೆರವಿಗೆ ಧಾವಿಸುವುದರೊಂದಿಗೆ ಕೊರೊನಾ ವಾರಿಯರ್ಸ್ಗಳಿಗೂ ಸಹಾಯ ನೀಡುವ ಬಗ್ಗೆ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಆಡಳಿತ ಮಂಡಳಿ ತುರ್ತು ಸಭೆ ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕೋವಿಡ್ ಲಾಕ್ಡೌನ್ನಿಂದಾಗಿ ಅತಂತ್ರಗೊAಡಿರುವ ಚಾಲಕರು ಹಾಗೂ ಮಾಲೀಕರ ಸ್ಥಿತಿಗತಿಯ ಬಗ್ಗೆ ಚರ್ಚಿಸಲಾಯಿತು. ಕೊರೊನಾ ವಾರಿರ್ಸ್ಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವಂತೆ ಸಭೆ ತೀರ್ಮಾನಿಸಿತು. ದಾನಿಗಳ ನೆರವಿನಿಂದ ತೀರಾ ಸಂಕಷ್ಟದಲ್ಲಿರುವ ಸಂಘದ ಸದಸ್ಯರ ಕುಟುಂಬದವರಿಗೆ ಸಹಾಯ ಮಾಡಲು ನಿರ್ಧರಿಸಲಾಯಿತು.
ಇದೇ ಸಂದರ್ಭ ಕೋವಿಡ್ ಸೋಂಕಿಗೆ ಸಿಲುಕಿ ಮೃತಪಟ್ಟ ನಾಲ್ವರು ಸದಸ್ಯರ ಕುಟುಂಬಗಳಿಗೆ ಮರಣ ನಿಧಿ ನೀಡಲು ತೀರ್ಮಾನಿಸಿತು. ಮೃತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಹಾಗೂ ಮಾಜಿ ಅಧ್ಯಕ್ಷೆ ಉಷಾ ತೇಜಸ್ವಿ ಹಾಗೂ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ವಹಿಸಿದ್ದರು. ಉಪಾಧ್ಯಕ್ಷ ಬಾಲಚಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಸಲಹೆಗಾರರಾದ ಸಿ.ಸಿ. ನಂದ, ಎ.ಪಿ. ವೀರರಾಜು, ಡ್ಯಾನಿ ಡೋಮ್ನಿಕ್, ಮಣಿ ಕುಶಾಲಪ್ಪ ಹಾಗೂ ಸುಭಾಶ್ ತಿಮ್ಮಯ್ಯ ಉಪಸ್ಥಿತರಿದ್ದರು.