ಅಮ್ಮತ್ತಿ, ಮೇ ೨೪: ವೀರಾಜಪೇಟೆ ತಾಲೂಕು ಕಾರ್ಮಾಡು ಗ್ರಾಮದ ಕೋವಿಡ್ ೧೯ ಟಾಸ್ಕ್ ಫೋರ್ಸ್ ಸಭೆಯನ್ನು ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಮಾಡು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್, ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು / ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ನ್ಯಾಯಬೆಲೆ ಅಂಗಡಿಗಳು ವಾರದ ಸೋಮವಾರ ಬುಧವಾರ ಹಾಗೂ ಶುಕ್ರವಾರ ೩ ದಿನಗಳು ಬೆಳಿಗ್ಗೆ ೭.೩೦ರಿಂದ ಸಂಜೆ ೫.೩೦ರವರೆಗೆ ತೆರೆದಿರುತ್ತದೆ. ತಪಾಸಣೆಯ ವೇಳೆ ಖರೀದಿಗೆ ಸಂಬAಧಪಟ್ಟ ದಾಖಲೆಗಳನ್ನು ಹಾಜರು ಪಡಿಸಬೇಕೆಂದು ಸಭೆಯಲ್ಲಿದ್ದವರಿಗೆ ಸೂಚಿಸಲಾಯಿತು.
ರೈತರು ಗ್ರಾಮದ ಒಳಗೆ ತಮ್ಮ ತೋಟಗಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಬೆಳಿಗ್ಗೆ ೭.೩೦ ರಿಂದ ೮.೩೦ಗಂಟೆವರೆಗೆ ಹಾಗೂ ಸಂಜೆ ೫.೦೦ ರಿಂದ ೬.೦೦ ಗಂಟೆಯವರೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ತಪಾಸಣೆಯ ವೇಳೆ ಜಮೀನಿನ ದಾಖಲೆಗಳನ್ನು ಸಂಬAಧಪಟ್ಟ ಇಲಾಖೆಯವರಿಗೆ ತೋರಿಸಬಹುದಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಂಡು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಯಿತು.
ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಆಗಮಿಸಿರುವ ಜನರು ಕಡ್ಡಾಯವಾಗಿ ೧೪ ದಿನಗಳವರೆಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕು. ತಪ್ಪಿದಲ್ಲಿ ಸಂಬAಧಪಟ್ಟ ಇಲಾಖೆಯವರು ಕಾನೂನು ಕ್ರಮ ಕೈಗೊಂಡು ಅಂಥವರನ್ನು ವೀರಾಜಪೇಟೆಯ ಬಾಳುಗೋಡುವಿನಲ್ಲಿರುವ ಕೋವಿಡ್ ೧೯ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಆರೋಗ್ಯ ಇಲಾಖೆಯಿಂದ ಸಭೆಯಲ್ಲಿ ಮಾಹಿತಿ ನೀಡಲಾಯಿತು.