ವೀರಾಜಪೇಟೆ, ಮೇ ೨೫: ಕಳೆದ ವರ್ಷದ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಕೊರೊನಾ ೨ನೇ ಅಲೆ ಬಡ ಆಟೋ ರಿಕ್ಷಾ ಚಾಲಕರ ಬೆನ್ನು ಹತ್ತಿದೆ. ಹೊತ್ತು ಮೂಡುವ ಮುನ್ನವೇ ಮನೆಯಿಂದ ಹೊರಗೆ ಬಂದು ದಿನವಿಡೀ ಊರೆಲ್ಲ ಸುತ್ತಾಡಿ, ಹೊತ್ತು ಮುಳುಗಿದ ಮೇಲೆ ಗೂಡು ಸೇರಿ ಮನೆಮಂದಿಯೊAದಿಗೆ ಕುಳಿತು ಎದುರಿಗೆ ಅನ್ನದ ತಟ್ಟೆಯನ್ನು ಇಟ್ಟುಕೊಂಡು, ಅದರಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದ ಆಟೋ ಚಾಲಕರು, ಟಫ್ ರೂಲ್ಸ್ ಹೆಸರಿನಲ್ಲಿ ಸರಕಾರ ೧೪ ದಿನಗಳ ಕಾಲ ಆಟೋ ಸೇವೆಗೆ ನಿರ್ಬಂಧ ವಿಧಿಸುತ್ತಿದ್ದಂತೆಯೇ ಅಕ್ಷರಶಃ ಮಾತು ಕಳೆದುಕೊಂಡಿದ್ದಾರೆ.

ವೀರಾಜಪೇಟೆ ಪಟ್ಟಣದಲ್ಲಿ ಹೆಚ್ಚು ಆಟೋಗಳೇ ತುಂಬಿಕೊAಡಿದ್ದು ಕೆಲವು ಆಟೋಗಳಿಗೆ ಮಾಲೀಕರೇ ಚಾಲಕರಾಗಿದ್ದರೆ, ಉಳಿದ ಆಟೋಗಳನ್ನು ಹೊಟ್ಟೆಪಾಡಿಗಾಗಿ ಬಾಡಿಗೆಗೆ ಪಡೆದುಕೊಂಡು ಚಲಾಯಿಸುತ್ತಿರುವವರು ಇದ್ದಾರೆ. ೧೮-೨೦ ವರ್ಷದ ವಯಸ್ಸಿನವರಿಂದ ಹಿಡಿದು ೬೦ ದಾಟಿದ ವಯೋವೃದ್ಧರೂ ಆಟೋಗಳನ್ನು ಓಡಿಸಿಕೊಂಡು ಅನ್ನ ಕಾಣುತ್ತಿದ್ದಾರೆ. ಬಹಳಷ್ಟು ಮನೆಗಳಲ್ಲಿ ಇದೇ ಆಟೋ ಚಾಲಕರೇ ಯಜಮಾನರಾಗಿದ್ದಾರೆ. ವಿವಿಧ ಜಾತಿ, ಧರ್ಮದ ಜನರು ಆಟೋ ಚಾಲಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಯಾವತ್ತೂ ಗಳಿಕೆಯಲ್ಲಿ ಅಂತಹ ಏರಿಕೆ ಕಾಣದೆ ದಿನ ಕಳೆಯಬೇಕು ಎನ್ನುವುದಕ್ಕಾಗಿ ಆಟೋಗಳನ್ನು ಆಶ್ರಯಿಸಿಕೊಂಡು ಬಂದವರು. ಉದ್ಯೋಗ ಸಿಗದೇ ಇದ್ದಾಗ ಆಟೋವೊಂದಿರಲಿ ಎಂದು ಮನೆಯವರ ಮಾತಿಗೆ ಹೂಂಗುಟ್ಟಿ ಆಟೋದಲ್ಲಿ ಕುಳಿತವರು! ರಿಕ್ಷಾದ ಒಳಗೆ ಪುಟ್ಟ ರೇಡಿಯೋ, ಮೊಬೈಲ್ ಫೋನ್ ಹಾಡನ್ನು ಕೇಳುತ್ತ ಎದೆಯೊಳಗಿನ ನೋವನ್ನು ಮರೆತವರು! ಇಂತಹ ಆಟೋ ಚಾಲಕರು ಯಾವತ್ತೂ ತಾವು ಕಷ್ಟದಲ್ಲಿದ್ದೇವೆ ಎಂದು ದೊಡ್ಡ ದನಿಯಲ್ಲಿ ಕೂಗಿಕೊಂಡವರಲ್ಲ.

ವರ್ಷದಿAದ ವರ್ಷಕ್ಕೆ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವಂತೆಯೇ ಬಹಳಷ್ಟು ಆಟೋ ಚಾಲಕರ ಪರಿಸ್ಥಿತಿ ಬಡ ಕಾರ್ಮಿಕರಿಗಿಂತ ಕಡೆಯಾಗಿದೆ ಎಂದರೆ ತಪ್ಪಾಗಲಾರದು. ಆದರೆ ಕೆಲಸ ಬಿಡುವ ಹಾಗಿಲ್ಲವಲ್ಲ! ಹೀಗೆ ತೆವಳುತ್ತ ದಿನಗಳನ್ನು ಸವೆಸುತ್ತಿರುವ ಆಟೋ ಚಾಲಕರಿಗೆ ಮಹಾಮಾರಿ ಕೊರೊನಾ ಸತತ ೨ನೇ ವರ್ಷ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ.

ಸರತಿ ಸಾಲಿನ ದುಡಿಮೆ

ಆಟೋ ಚಾಲಕರ ದುಡಿಮೆ ದಿನಕ್ಕೆ ಇಷ್ಟೇ ಎನ್ನುವಂತಿಲ್ಲ. ಸಿಕ್ಕಷ್ಟು ಬಾಡಿಗೆ, ಅದರಲ್ಲಿಯೇ ಸಂತೃಪ್ತಿ! ತಾಲೂಕಿನಲ್ಲಿ ಪ್ರಮುಖವಾಗಿ ಬಸ್ ನಿಲ್ದಾಣ, ಸರ್ಕಲ್, ಕೆಎಸ್‌ಆರ್‌ಟಿಸಿ ನಿಲ್ದಾಣ, ಮಲಬಾರ್ ರೋಡ್ ಹೀಗೆ ಅಕ್ಕಪಕ್ಕದಲ್ಲಿ ಸಾಲಿನಲ್ಲಿ ನಿಂತಿರುತ್ತಿದ್ದ ಆಟೋ ರಿಕ್ಷಾಗಳು ತಮ್ಮ ಸರತಿಗಾಗಿ ಕಾದು ಸುಸ್ತಾದ ದಿನಗಳು ಅದೆಷ್ಟು ಇವೆಯೊ! ಹಬ್ಬ, ಮದುವೆ, ಮುಂಜಿ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಒಂದಷ್ಟು ಉತ್ಸಾಹದಿಂದಲೇ ಓಡಾಡುವ ಆಟೋ ರಿಕ್ಷಾಗಳು ವರ್ಷದ ದುಡಿಮೆಯನ್ನು ಹೊಂದಿಸಿಕೊಳ್ಳಲು ಹೆಣಗಾಡುತ್ತವೆ. ಆದರೆ ಮದುವೆ ಸೀಸನ್ ಕೊರೊನಾ ೨ನೇ ಅಲೆಯಲ್ಲಿ ಮುಳುಗಿ ಹೋಗಿದೆ. ಪೇಟೆಯನ್ನು ಕರ್ಫ್ಯೂ ಸಂಪೂರ್ಣವಾಗಿ ನುಂಗಿ ಹಾಕಿದೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿ ಹೋಗಿವೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಪ್ರಯಾಣಿಕರನ್ನಾಗಿಸಿ ಕೊಂಡು ದುಡಿಮೆಯನ್ನು ಹುಡುಕಿಕೊಂಡಿದ್ದ ಕೆಲವು ಆಟೋ ರಿಕ್ಷಾಗಳಿಗೆ, ಇದೀಗ ಶಾಲಾ-ಕಾಲೇಜು ಆರಂಭವೇ ಅನಿಶ್ಚಿತತೆಗೆ ಸಿಲುಕಿರುವುದರಿಂದ ಆಟೋ ಭವಿಷ್ಯವೂ ಅಸ್ಪಷ್ಟವಾಗಿದೆ.

ಈಗ ಏನಿದ್ದರೂ ಅಲ್ಲೊಂದು ಇಲ್ಲೊಂದು ಆಟೋ ರಿಕ್ಷಾಗಳು ಊರ ನಡುವಿನ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಇರುವ ಆ್ಯಂಬ್ಯುಲೆನ್ಸ್ಗಳ ಕೆಲಸಕ್ಕಷ್ಟೇ ಸೀಮಿತವಾಗಿವೆ. ದಿನದಿಂದ ದಿನಕ್ಕೆ ಆಟೋ ಚಾಲಕರ ಜೀವನ ನಿರ್ವಹಣೆ ತೀರ ಕಷ್ಟ ಎಂಬAತಾಗಿದೆ. ಅತ್ತ ಮಧ್ಯಮ ವರ್ಗವೂ ಅಲ್ಲದೇ ಇತ್ತ ಬಡವರ ಪಟ್ಟಿಗೂ ಸೇರದಂತೆ ಇರುವ ಆಟೋ ಚಾಲಕರು ಅವರಿವರ ಮುಂದೆ ಕೈಯೊಡ್ಡಲೂ ಮುಜುಗರ ಪಟ್ಟುಕೊಳ್ಳುವರು. ಕಳೆದ ವರ್ಷ ಸರಕಾರ ಘೋಷಿಸಿದ್ದ ರೂ. ೫೦೦೦ ತಾಲೂಕಿನ ಶೇ. ೫೦ ಆಟೋ ಚಾಲಕರನ್ನಷ್ಟೇ ತಲುಪಿದೆ! ಉಳಿದವರು ಇನ್ನೂ ಅನರ್ಹರಾಗಿಯೇ ಉಳಿದುಕೊಂಡಿದ್ದಾರೆ. ಮತ್ತೆ ಕೊರೊನಾ ಬಂದಿದೆ. ಕೆಲಸ ಕಳೆದುಕೊಂಡು ಮನೆಯ ಮುಂದೆಯೋ, ಪರಿಚಿತರ ಮನೆಯ ಬಾಗಿಲಿನಲ್ಲೋ ಅಥವಾ ರಸ್ತೆಯ ಅಂಚಿನಲ್ಲೆಲ್ಲೋ ಕೆಲಸ ಕಳೆದುಕೊಂಡು ನಿಂತಿರುವ ಆಟೋಗಳ ಮೇಲೆ ಕರಿಮೋಡದಂತೆ ಧೂಳು ಆವರಿಸಿಕೊಂಡಿದೆ. ಕನಿಷ್ಟ ಅದನ್ನು ಒರೆಸಿಕೊಳ್ಳಲೂ ಆಗದಂತೆ ಆಟೋ ಚಾಲಕರ ಕೈ ನಡುಗುತ್ತಿದೆ.

- ಕೆ. ನಮನ