ವಿದ್ಯಾರ್ಥಿಗೆ ಮುಕ್ತಿಯಿಲ್ಲದ ಮನೆ ಪಾಠ - ಶಿಕ್ಷಕರಿಗೆ ಕೋವಿಡ್ ಕರ್ತವ್ಯದ ಆತಂಕದ ಕಾಟ

ಈ ವರ್ಷ ಶಾಲಾ ವಿದ್ಯಾರ್ಥಿ ಗಳಿಗೆ ಪ್ರವಾಸ... ಅವರು ಓದಿದ ಶಾಲೆ, ತರಗತಿ ವೀಕ್ಷಣೆಯ ಅವಕಾಶ..!!

ಹೀಗೊಂದು ಹಾಸ್ಯ ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಲೇ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಹಾಸ್ಯಕ್ಕಿಂತ ಮುಂದಿನ ದಿನಗಳಲ್ಲಿ ವಾಸ್ತವ ಆಗಬಹುದೇನೋ ಎಂಬುದು ಕೆಲವರ ಆತಂಕದ ಪ್ರಶ್ನೆಯಾಗಿದೆ.

ಯಾಕೆಂದರೆ ಪ್ರಾಥಮಿಕ ಶಾಲಾ ಮಕ್ಕಳು ತಮ್ಮ ಶಾಲೆ, ತರಗತಿಗಳಿಗೆ ತೆರಳದೇ ೧೪ ತಿಂಗಳೇ ಕಳೆದಿದೆ. ಶಾಲೆಯ ದಾರಿ, ದಿಕ್ಕನ್ನೇ ಈ ಪುಟಾಣಿಗಳು ಮರೆತಂತಿದೆ. ಶಾಲೆ ಹೋಗಲಿ ಪಾಠ ಕಲಿಸುವ ಶಿಕ್ಷಕರನ್ನೂ ಮಕ್ಕಳು ಮರೆತು ಹೋಗಿರುವಷ್ಟು ದಿನಗಳು ಕಳೆದಿದೆ. ಶಾಲೆಯೊಂದು ತಮಗೆ ಯಾಕೆ ಮುಖ್ಯ ಎಂಬುದನ್ನು ಮಕ್ಕಳು ಹೇಗೆ ಮರೆತಿದ್ದಾರೋ ಹಾಗೇ ಶಾಲೆಯ ಮಹತ್ವವನ್ನು ಮಕ್ಕಳಿಗೆ ತಿಳಿಹೇಳುವಲ್ಲಿಯೂ ಪೋಷಕರು ತಮ್ಮ ಪಾತ್ರವನ್ನು ಮರೆತಂತಿದೆ.

ಅನೇಕ ಪೋಷಕರಿಗೆ ಮಕ್ಕಳು ಮನೆಯಲ್ಲಿರುವುದು ಸಂತೋಷದ ವಿಷಯ ಎಂಬAತಾಗಿದೆ. ಶಾಲೆಯ ಹೊರೆ ತಪ್ಪಿತು.. ಮನೆಯಲ್ಲಿ ಆರಾಮವಾಗಿ, ಸುರಕ್ಷಿತವಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪೋಷಕರಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಬಾಲ್ಯದಲ್ಲಿ ಯಾವ ರೀತಿಯಲ್ಲಿ ಶಿಕ್ಷಣದ ಅಡಿಪಾಯ ಸಿಗಬೇಕಿತ್ತೋ ಅದರಿಂದ ವಂಚಿತನಾಗಿ ಮನಸ್ಸು ದಿಕ್ಕಾ ಪಾಲಾಗುತ್ತಿದೆ. ಭವಿಷ್ಯದಲ್ಲಿ ಇದು ಮಕ್ಕಳ ಮೇಲೆ ಖಂಡಿತಾ ಗಂಭೀರ ಪರಿಣಾಮ ಬೀರುವುದಂತೂ ಖಂಡಿತಾ.

ಕೊರೊನಾದ ಎರಡನೇ ಅಲೆಯ ಅಬ್ಬರ ಇನ್ನೂ ಹೆಚ್ಚುತ್ತಲೇ ಇರುವ ದಿನಗಳಲ್ಲಿಯೇ ಸರ್ಕಾರ ಕೊರೊನಾದ ಮೂರನೇ ಅಲೆಯ ಆತಂಕದ ಪ್ರಸ್ತಾಪವನ್ನು ಪದೇ ಪದೇ ಮಾಡುತ್ತಿದೆ. ಇದರಿಂದಾಗಿ ಪೋಷಕರು, ಶಿಕ್ಷಕ ವರ್ಗದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮತ್ತಷ್ಟು ಗಾಬರಿ ಉಂಟಾಗಿದೆ.

ಎರಡನೇ ಅಲೆಯನ್ನು ಯಾವ ರೀತಿ ಎದುರಿಸುವುದು, ಯಾವ ರೀತಿ ಈಗಿನ ಸ್ಥಿತಿಯಿಂದ ಸುರಕ್ಷಿತ ಸ್ಥಿತಿಗೆ ಬರುವುದು ಎಂದು ಕಾರ್ಯಯೋಜನೆ ಜಾರಿಗೊಳಿಸಬೇಕಾದ ಸರ್ಕಾರ ಮೂರನೇ ಅಲೆ ಎಂಬ ಹೆದರಿಕೆಯ ಗುಮ್ಮವನ್ನು ವ್ಯಾಪಿಸುತ್ತಿದೆ.

ಹೀಗಾಗಿ ಏನಾಗಿದೆ ಎಂದರೆ ಶಿಕ್ಷಣ ತಜ್ಞರು ಸರ್ಕಾರದ ಮಾತು ನಂಬಿಕೊAಡು, ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ದಾಳಿಯಿಡಲಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ. ಮಕ್ಕಳು ಶಾಲೆಗೆ ಹೋದಾಗ ಕೊರೊನಾ ಮೂರನೇ ಅಲೆಯಿಂದ ಸೋಂಕು ತಗುಲಿದರೆ ಮಕ್ಕಳ ಜೀವಕ್ಕೇ ಅಪಾಯ ಇದೆ ಎಂದೆಲ್ಲಾ ವರದಿ ನೀಡಿದ್ದಾರೆ. ಟಿವಿ ಮಾಧ್ಯಮಗಳು ಈ ಗಾಬರಿಯ ಸುದ್ದಿಯನ್ನು ಉತ್ಪೇಕ್ಷೆಯ ಮಸಾಲೆ ಬೆರೆಸಿ ಪ್ರಸಾರ ಮಾಡಿ ಶಾಲೆಗೆ ಹೋದರೆ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಿದೆ.

ಇವುಗಳಿಂದ ಮಕ್ಕಳನ್ನು ಶಾಲೆಗೆ ಈ ವರ್ಷ ಕಳುಹಿಸುವುದೇ ಬೇಡ ಎಂಬ ನಿರ್ಧಾರಕ್ಕೆ ಪೋಷಕರು ಬರುವಂತಾಗಿದೆ.

ಇನ್ನೂ ಎರಡನೇ ಅಲೆಯೇ ತೊಲಗಿಲ್ಲ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುತ್ತದೆ ಎಂದು ಸ್ಪಷ್ಟವಾಗಿ ಆರೋಗ್ಯ ಸಚಿವಾಲಯ ಕೂಡ ಖಚಿತಪಡಿಸಿಲ್ಲ.

ತಜ್ಞ ವೈದ್ಯರು ಕೂಡ ಮಕ್ಕಳಲ್ಲಿ ಸದಾ ಸಣ್ಣ ಪ್ರಮಾಣದ ಸೋಂಕು ತಗುಲುವ ಸಾಧ್ಯತೆ ಇದೆಯೇ ವಿನಾ ಗಾಬರಿಯಾಗುವ ಮಟ್ಟದಲ್ಲಿ ಸೋಂಕು ಮಕ್ಕಳಲ್ಲಿ ತಗುಲುವ ಸಾಧ್ಯತೆ ಇಲ್ಲ ಎಂದಿದ್ದಾರೆ. ಕೊಡಗಿನಲ್ಲಿ ಮಕ್ಕಳಲ್ಲಿ ಈಗಾಗಲೇ ಕೊರೊನಾ ಸೋಂಕು ತಗುಲಿರುವ ಪ್ರಮಾಣ ಅತೀ ಕಡಿಮೆ ಗಂಭೀರ ಪರಿಸ್ಥಿತಿಯಲ್ಲಿ ಯಾವುದೇ ಮಕ್ಕಳೂ ಕೋವಿಡ್ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಮಕ್ಕಳ ತಜ್ಞ ಡಾ. ಕುಶ್ವಂತ್ ಕೋಳಿಬೈಲು ಹೇಳುತ್ತಾರೆ.

ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬಿಡುವುದು ಸರ್ಕಾರ ಶಾಲೆಗಳನ್ನು ತೆರೆಯಿರಿ ಎಂಬ ನಿರ್ಧಾರ ತೆಗೆದುಕೊಂಡ ಬಳಿಕವೇ ಸ್ಪಷ್ಟವಾಗಲಿದೆ. ಆದರೆ ಮಕ್ಕಳಿಗೆ ಈ ವರ್ಷವೂ ಶಾಲೆಯೇ ಇಲ್ಲ ಎಂಬ ಆತಂಕಕಾರಿ ವಿಚಾರವನ್ನು ಮನದಲ್ಲಿ ಬೇರೂರುವಂತೆ ಮಾಡಿ ಶಿಕ್ಷಣದಿಂದ ಮಾನಸಿಕವಾಗಿ ವಿಮುಖರಾಗುವಂತೆ ಮಾಡುವುದು ಖಂಡಿತಾ ಸರಿಯಲ್ಲ.

ಮಕ್ಕಳ ಕಥೆ ವ್ಯಥೆ ಹೀಗಾದರೆ ಶಿಕ್ಷಕರದ್ದು ಮುಗಿಯದ ಗೋಳಿನ ಕಥೆಯಾಗಿದೆ.

ಚುನಾವಣಾ ವ್ಯವಸ್ಥೆ ವಿವಿಧ ಲಸಿಕೆ ಆಂದೋಲನ, ಸರ್ಕಾರಿ ಯೋಜನೆಗಳ ಪ್ರಚಾರ, ಜನಸಂಖ್ಯೆಯ ಅಂಕಿಅAಶ ಸಂಗ್ರಹ ಸೇರಿದಂತೆ ವಿವಿಧ ಶಿಕ್ಷಣೇತರ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುತ್ತಿದ್ದ ಸರ್ಕಾರ ಇದೀಗ ಕೋವಿಡ್ ಕರ್ತವ್ಯಕ್ಕೂ ಶಿಕ್ಷಕರನ್ನು ನೇಮಕ ಮಾಡಿದೆ. ಒಂದು ಕಡೆ ತಮಗೆ ಅಭ್ಯಾಸವೇ ಇಲ್ಲದ ಆನ್‌ಲೈನ್ ತರಗತಿಗಳನ್ನು ಪುಟ್ಟ ಮೊಬೈಲ್‌ನಲ್ಲಿ ನಡೆಸಿ, ಮಕ್ಕಳಿಗೆ ತಿಳಿಹೇಳುವಲ್ಲಿ ಹೈರಾಣಾಗಿ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿದ್ದ ಶಿಕ್ಷಕ ವರ್ಗವನ್ನು ಇದೀಗ ಮನೆಯಲ್ಲಿ ಕುಳಿತದ್ದು ಸಾಕು... ಮನೆಮನೆಗೆ ಹೋಗಿ ಕೋವಿಡ್ ಸೋಂಕಿತರ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಎಂಬ ಕರ್ತವ್ಯಕ್ಕೆ ಸರ್ಕಾರ ನಿಯೋಜಿಸಿದೆ.

ಕೋವಿಡ್ ವಾರ್ ರೂಮ್, ಸಹಾಯವಾಣಿ, ಚೆಕ್‌ಪೋಸ್ಟ್, ಬಸ್ ನಿಲ್ದಾಣ ಮುಂತಾದ ಕಡೆ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು. ಸೋಂಕಿತರ ಮನೆಗೆ ತೆರಳಿ ಪ್ರಾಥಮಿಕ ಸಂಪರ್ಕ ಸಂಗ್ರಹಿಸಿ ಅವರ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕು.

ಕೊಡಗಿನಂಥ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಮನೆ ತಿರುಗಿ ಸೋಂಕಿತರ ನೇರ ಸಂಪರ್ಕಕ್ಕೆ ಬರುತ್ತಿರುವ ಶಿಕ್ಷಕ ವರ್ಗ ಸದಾ ಅಪಾಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ೬೦೦ ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ

ಸೋಮಲ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಕೋವಿಡ್‌ನಿಂದ ೪೦೦ ಶಿಕ್ಷಕರು ಸಾವನ್ನಪ್ಪಿದ ಆಘಾತಕಾರಿ ವರದಿಯಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಶಿಕ್ಷಕರನ್ನು ಕರ್ತವ್ಯಕ್ಕೆ ಕಡ್ಡಾಯವಾಗಿ ನಿಯೋಜಿಸಲಾಗುತ್ತಿರುವುದರಿಂದ ಸಾವು ಸಂಭವಿಸುತ್ತಿದೆ ಎಂದು ವರದಿಗಳು ಹೇಳಿವೆ.

ಮುಂದಿನ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯ ಸಿದ್ಧತೆಗಳನ್ನೂ ಶಿಕ್ಷಕ ವರ್ಗ ಕೈಗೊಳ್ಳಬೇಕಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಹೋಲಿಸಿ ದ್ದಲ್ಲಿ ಶಿಕ್ಷಣದಿಂದ ಹಿಂದುಳಿದಿದ್ದಾರೆ. ಅಂಥ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಸೇರ್ಪಡೆಗೊಳಿ ಸಬೇಕಾದ ದೊಡ್ಡ ಸವಾಲು ಶಿಕ್ಷಕ ಸಮುದಾಯದ ಮೇಲಿದೆ.

ಮೊದಲ ಅಲೆ, ಎರಡನೇ ಅಲೆಗಳಿಗಿಂತ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮುಂದಿನ ದಿನಗಳಲ್ಲಿ ಯೋಗ್ಯ ರೀತಿಯಲ್ಲಿ ಶಿಕ್ಷಣದ ಅಲೆ ಏಳುವುದು ಅತ್ಯಂತ ಅನಿವಾರ್ಯವಾಗಿದೆ. ಶಾಲೆಗಳಿಂದ ವಂಚಿತರಾಗಿ ಮನೆಯಲ್ಲಿಯೇ ಮೊಬೈಲ್ ಮೂಲಕ ಸೂಕ್ತ ಶಿಕ್ಷಣ ಕಲಿಯುತ್ತಿದ್ದೇವೆ ಎಂದು ತಿಳಿದುಕೊಂಡಿರುವ ವಿದ್ಯಾರ್ಥಿಗಳಿಗೆ ದೇಶದಲ್ಲಿ ದಿನಗಳು ಸುರಕ್ಷಿತವಾದ ಬಳಿಕ ಉತ್ತಮ ಶಿಕ್ಷಣವನ್ನು ಮತ್ತೆ ಕೊಡಬೇಕಾದ ಬಹಳ ದೊಡ್ಡ ಸವಾಲು ಶಿಕ್ಷಕ ಸಮುದಾಯದ ಮೇಲಿದೆ. ಅದುವೇ ಶಿಕ್ಷಕರಿಗಿರುವ ಬಹಳ ದೊಡ್ಡ ಅಗ್ನಿಪರೀಕ್ಷೆ.

(ಶಿಕ್ಷಣ ರಂಗದ ಸಮಸ್ಯೆ ಕುರಿತ ಸರಣಿ ಮುಕ್ತಾಯ)