ಮಡಿಕೇರಿ, ಮೇ ೨೪: ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರ ಕೋವಿಡ್ ಪರೀಕ್ಷೆ ಮಾಡುವ ಕಾರ್ಯ ಇಂದು ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆಯಿತು. ಇಂದು ಬೆಳಿಗ್ಗೆ ೭ ರಿಂದ ೧೧ ಗಂಟೆಯವರೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ವತಿಯಿಂದ ವ್ಯಾಪಾರಸ್ಥರ, ವರ್ತಕರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವ ಕಾರ್ಯ ನಡೆಯಿತು. ಬಸ್ ನಿಲ್ದಾಣದ ೩ ಸ್ಥಳಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ಕಾರ್ಯ ನಡೆದಿದ್ದು, ನಗರಸಭಾ ಪೌರಾಯುಕ್ತರು, ನಗರ ಠಾಣೆ ಠಾಣಾಧಿಕಾರಿ ಅಂತಿಮ sಅವರು ಪರಿಶೀಲನೆ ನಡೆಸಿದರು.
೧೫೦ ಮಂದಿಗೆ ಪರೀಕ್ಷೆ
ಸರಕಾರಿ ಬಸ್ ನಿಲ್ದಾಣದಲ್ಲಿ ಒಟ್ಟು ೧೫೦ ಮಂದಿ ವ್ಯಾಪಾರಸ್ಥರು, ವರ್ತಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. ೧೨೩ ಮಂದಿಗೆ ಆರ್.ಎ.ಟಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್) ಮೂಲಕ ಪರೀಕ್ಷೆ ಮಾಡಿಸಲಾಯಿತು. ಇದರಲ್ಲಿ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ೨೭ ಮಂದಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲಾಗಿದ್ದು, ಇನ್ನಷ್ಟೆ ಫಲಿತಾಂಶ ಬರಬೇಕಿದೆ.