ಮಡಿಕೇರಿ, ಮೇ.೨೪; ಅಲ್ಲೊಂದು ಪುಟ್ಟ ಬಾಲಕಿ ತನ್ನ ಅಮ್ಮನನ್ನು ಕಳೆದುಕೊಂಡ ದುಃಖದ ನಡುವೆ ಅಮ್ಮನನ್ನು ನೆನಪಿಸಿಕೊಳ್ಳುವ ಆ ನೆನಪುಗಳಿಗಾಗಿ ಮರುಗುತ್ತಿದ್ದಾಳೆ., ಅಮ್ಮನ ನೆನಪುಗಳನ್ನ ಹೊತ್ತಿರುವ ಆ ಪುಟ್ಟ ಮೊಬೈ¯ನ್ನು ನನಗೆ ಕೊಡಿ ಎಂದು ಅಂಗಲಾಚುತ್ತಿದ್ದಾಳೆ.., ಇಲ್ಲಿ ಮಕ್ಕಳಿಬ್ಬರು ತಮ್ಮ ತಂದೆಯೊAದಿಗೆ ತಮಗೆ ಜೀವ ನೀಡಲು ಕಾರಣವಾದ ಅಮ್ಮನ ಜೀವನಾಡಿಗೋಸ್ಕರ ಕಾಯುತ್ತಿದ್ದಾರೆ., ಅಮ್ಮನ ಜೀವದಂತಿದ್ದ ಆ ತಾಳಿಸರವನ್ನು ದಯಮಾಡಿ ನಮಗೆ ಕೊಟ್ಟುಬಿಡಿ ಎಂದು ಕಣ್ಣೀರಿಡುತ್ತಿದ್ದಾರೆ..!

ಇದು ಕೊರೊನಾ ಸೋಂಕಿನಿAದ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರ ಕುಟುಂಬಸ್ಥರ ನೋವಿನ ವ್ಯಥೆ..! ಬಾಲಕಿಯ ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟ ಸಂದರ್ಭ ಆಕೆಯ ತಾಯಿಯ ಬಳಿಯಿದ್ದ ಮೊಬೈಲ್ ಕಾಣೆಯಾಗಿದೆ. ಇತ್ತ ಈ ಇಬ್ಬರು ಸಹೋದರರ ತಾಯಿ ಕೂಡ ಮೃತಪಟ್ಟ ಸಂದರ್ಭ ಆಕೆಯ ಕತ್ತಿನಲ್ಲಿದ್ದ ತಾಳಿ ಸರ ಕೂಡ ನಾಪತ್ತೆಯಾಗಿದೆ. ಇದೀಗ ಈ ಎರಡೂ ಕುಟುಂಬಸ್ಥರು ತಮಗುಳಿದಿರುವ ಆ ಜೀವಗಳ ನೆನಪುಗಳನ್ನಾದರೂ ಮರಳಿ ನಮಗೆ ಕೊಡಿ ಎಂದು ಕಂಡ ಕಂಡವರಲ್ಲಿ ಗೊಗರೆಯುವಂತಹ ಪರಿಸ್ಥಿತಿ ಉಂಟಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಹೊರಬರುತ್ತಿದ್ದಂತೆ ಉಸ್ತುವಾರಿ ಸಚಿವರು, ಶಾಸಕರುಗಳು, ಜಿಲ್ಲಾಡಳಿತ ಸೇರಿ ಒಂದೊAದಾಗಿ ಪರಿಹಾರ ಮಾಡುತ್ತಾ ಬರಲಾಗುತ್ತಿದೆ. ಸಿಬ್ಬಂದಿ, ನೀರು, ಊಟ ಹೀಗೇ ಒಂದೊAದಾಗಿ ಸರಿಯಾಗುತ್ತಿದ್ದಾಗ ರೋಗಿಗಳ ಕಾಪಾಡಬೇಕಾದ ವೈದ್ಯರೇ ಲಂಚದ ಬಲೆಗೆ ಬಿದ್ದಾಯ್ತು. ಇದಾದ ಬಳಿಕ ಆಡಳಿತಾತ್ಮಕವಾಗಿ ಸುಧಾರಣೆಗಾಗಿ ಹಿರಿಯ ಅಧಿಕಾರಿಗಳ ಬಳಿಯಿದ್ದ ಪ್ರಬಾರ ಅಧಿಕಾರವನ್ನೂ ಬದಲಾವಣೆ ಮಾಡಲಾಗಿದೆ. ಹೊರ ನೋಟದ ವ್ಯವಸ್ಥೆಗಳು ಸರಿಯಾಗುತ್ತಾ ಹೋಗುತ್ತಿದ್ದಂತೆ ಒಳಗಡೆ ಗೆದ್ದಲು ಗೂಡಿನೊಳಗಡೆ ಸೇರಿಕೊಂಡಿರುವ ಹೆಗ್ಗಣಗಳ ಆಟ ಈಗ ಹೊರಬರುತ್ತಿವೆ. ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪುವವರಿಗೆ ಸೇರಿದ ಬೆಲೆಬಾಳುವ ವಸ್ತುಗಳು ಮಾಯವಾಗುತ್ತಿರುವದು ಆತಂಕ ಸೃಷ್ಟಿಸಿದೆ. ಇದು ಬಹು ಸಮಯಗಳಿಂದ ನಡೆಯುತ್ತಿದೆಯಾದರೂ ಇಗೀಗವಷ್ಟೇ ಒಂದೊAದಾಗಿ ಬೆಳಕಿಗೆ ಬರುತ್ತಿದೆ.

(ಮೊದಲ ಪುಟದಿಂದ) ಆ ಪೈಕಿ ಈ ಮೊಬೈಲ್ ಹಾಗೂ ತಾಳಿಸರ ಮಾಯವಾಗಿರುವ ಪ್ರಕರಣಗಳು ಸಂಚಲನ ಸೃಷ್ಟಿಸಿವೆ.

ಅಮ್ಮನ ನೆನಪು ಕೊಡಿ

ಕಳೆದ ತಾ. ೬ರಂದು ಕುಶಾಲನಗರ ಹಾರಂಗಿ ರಸ್ತೆಯ ಗುಮ್ಮನಕೊಲ್ಲಿ ಗ್ರಾಮದ ಬಸಪ್ಪ ಬಡಾವಣೆ ನಿವಾಸಿ ನವೀನ್‌ಕುಮಾರ್ ಅವರ ಪತ್ನಿ ಪ್ರಭಾ ಕೋವಿಡ್ ಸೋಂಕಿನಿAದ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತ ಪತಿ ಹಾಗೂ ಪುತ್ರಿ ಹೃತಿಕ್ಷಾ ಮನೆಯಲ್ಲಿಯೇ ಗೃಹ ಸಂಪರ್ಕದಲ್ಲಿದ್ದರು. ಇತ್ತ ಆಸ್ಪತ್ರೆಯಲ್ಲಿದ್ದ ಪ್ರಭಾ ತಾ.೧೬ರಂದು ಸಾವನ್ನಪ್ಪಿದ್ದಾರೆ. ಆಕೆಗೆ ಸೇರಿದ ಬಟ್ಟೆ, ಇನ್ನಿತರ ವಸ್ತುಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಆದರೆ, ಆಕೆಯ ಬಳಿಯಿದ್ದ ಮೊಬೈಲ್‌ಅನ್ನು ಮಾತ್ರ ಕೊಟ್ಟಿರಲಿಲ್ಲ. ಮೊಬೈಲ್ ಬಗ್ಗೆ ವಿಚಾರಿಸಿದರೆ, ಆಸ್ಪತ್ರೆಯ ಸಿಬ್ಬಂದಿಗಳಿAದ ಯಾವದೇ ಪ್ರತಿಕ್ರಿಯೆ ಸಿಗಲಿಲ್ಲ. ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು. ಈ ಬಗ್ಗೆ ಕಳೆದ ತಾ. ೧೯ರಂದೇ ‘ಶಕ್ತಿ’ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆೆಯಲಾಗಿತ್ತು. ಅತ್ತಲಿಂದಲೂ ಯಾವದೇ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಇದೀಗ ಮೃತಳ ಪುತ್ರಿ ಐದನೇ ತರಗತಿಯಲ್ಲಿ ಓದುತ್ತಿರುವ ಹೃತಿಕ್ಷಾ ಜಿಲ್ಲಾಧಿಕಾರಿ, ಶಾಸಕರುಗಳು ಹಾಗೂ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳಿಗೆ ಪತ್ರ ಬರೆದು ತನ್ನ ತಾಯಿಯ ಮೊಬೈಲ್ ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ‘ನಾನು ತಬ್ಬಲಿಯಾಗಿದ್ದು, ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿ ಇರುತ್ತದೆ. ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಸಿಕ್ಕಿದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲಪಿಸಿಕೊಡಿ’ ಎಂದು ಅಂಗಲಾಚಿಕೊAಡಿದ್ದಾಳೆ. ಈ ಬಗೆ ಆಕೆಯ ತಂದೆಯ ಬಳಿ ವಿಚಾರಿಸಿದಾಗ ಪ್ರತಿಕ್ರಿಯಿಸಿದ ಅವರು, ‘ಆಸ್ಪತ್ರೆಯಿಂದ ಬ್ಯಾಗ್ ಮಾತ್ರ ಕೊಟ್ಟಿದ್ದಾರೆ. ಮೊಬೈಲ್ ಕೊಟ್ಟಿಲ್ಲ, ಅದರಲ್ಲಿ ಪತ್ನಿಯ ಫೋಟೊಗಳಿವೆ, ಅದರಲ್ಲೇ ಮಗಳ ಆನ್‌ಲೈನ್ ಕ್ಲಾಸ್ ಕೂಡ ಆಗುತ್ತಿತ್ತು, ನನ್ನಲ್ಲಿ ಸಣ್ಣ ಮೊಬೈಲ್ ಇರುವದು, ಹಾಗಾಗಿ ನನ್ನ ಮಗಳಿಗೆ ಮೊಬೈಲ್ ಕೊಟ್ಟುಬಿಡಿ’ ಎಂದು ಕೇಳಿಕೊಂಡಿದ್ದಾರೆ.

ತಾಯಿಯ ಜೀವವಿದೆ

ಇತ್ತ ಕುಶಾಲನಗರ ಹೋಬಳಿ ರಂಗಸಮುದ್ರ ಗ್ರಾಮದ ರಸಲ್‌ಪುರ ಗ್ರಾಮ ನಿವಾಸಿ, ರವಿ ಉತ್ತಪ್ಪ ಅವರ ಪತ್ನಿ ಕಮಲ(೫೧) ಅವರನ್ನು ತಾ.೧ರಂದು ಅವರ ಪುತ್ರರು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾ.೧೮ರವರೆಗೂ ಚೆನ್ನಾಗಿಯೇ ಇದ್ದ ಅವರು ತನ್ನ ಪುತ್ರನೊಂದಿಗೆ ೪೫ನಿಮಿಷಗಳ ಕಾಲ ಮಾತನಾಡಿದ್ದಾರೆ. ಆದರೆ, ತಾ.೨೦ರಂದು ಅವರು ಸಾವನ್ನಪ್ಪಿದ್ದಾರೆ. ಇಲ್ಲಿಯೂ ಅವರಿಗೆ ಸಂಬAಧಿಸಿದ ಕೆಲವೊಂದು ವಸ್ತುಗಳನ್ನು ಕೊಟ್ಟಿದ್ದರಲ್ಲದೆ, ಆಕೆಯ ಕತ್ತಿನಲ್ಲಿದ್ದ ಎರಡು ಗ್ರಾಂ. ತೂಕದ ಅಂದಾಜು ರೂ.೧.೫೦ಲಕ್ಷ ಬೆಲೆಬಾಳುವ ತಾಳಿಸರ ಮಾತ್ರ ಕೊಡಲಿಲ್ಲ. ವಿಧಿ ವಿಧಾನ ಮುಗಿಸಿ ಆಸ್ಪತ್ರೆಗೆ ಬಂದು ಈ ಬಗ್ಗೆ ವಿಚಾರಿಸಿದಾಗ ‘ಆಭರಣ, ಬೆಲೆ ಬಾಳುವ ವಸ್ತುಗಳನ್ನು ಹಾಕಿ ಕಳುಹಿಸಬಾರದು ಎಂದು ರೇಡಿಯೋ, ಪೇಪರ್‌ನಲ್ಲಿ ಕೊಟ್ಟಿದ್ದೇವಲ್ಲ, ಯಾಕೆ ಹಾಕಿ ಕಳುಹಿಸುತ್ತೀರಾ.?, ನಿಮ್ಮ ತಾಯಿ ಯಾವ ಕೌಂಟರ್‌ನಲ್ಲಿದ್ದರು.?’ ಎಂದೆಲ್ಲ ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ.

ಇತ್ತ ತಂದೆ ಕೂಡ ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಲ್ಲಿದ್ದುದರಿಂದ ಇಬ್ಬರು ಮಕ್ಕಳಾದ ಮಿಥುನ್ ಹಾಗೂ ಜಗನ್ ಸಹೋದರರಿಗೆ ಏನೂ ಕೂಡ ಮಾಡಲು ತೋಚದೆ ಕಂಗಾಲಾಗಿದ್ದಾರೆ. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ಅವರು, ತಾಯಿಯ ಯೋಚನೆಗಾದರೂ ನಮ್ಮ ಜೀವದಂತಿದ್ದ ತಾಯಿಯ ತಾಳಿಸರವನ್ನಾದರೂ ಹಿಂತಿರುಗಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.

‘ತಾಯಿಯನ್ನು ಐಸಿಯುನಲ್ಲಿ ಇಡಲಾಗಿತ್ತು. ಅಲ್ಲಿಂದ ಪ್ರತಿನಿತ್ಯ ತಾಯಿಯ ಆರೋಗ್ಯದ ಬಗ್ಗೆ ಸಹಾಯವಾಣಿಯಿಂದ ಕರೆ ಮಾಡಿ ಹೇಳುತ್ತಿದ್ದರು. ಆದರೆ, ಒಂದು ದಿವಸ ಕೂಡ ಅವರ ಬಳಿಯಿದ್ದ ಆಭರಣವನ್ನು ಬಿಚ್ಚಿಟ್ಟಿದ್ದೇವೆ ಎಂದಾಗಲೀ, ತಕೊಂಡು ಹೋಗಿ ಎಂದಾಗಲೀ ಹೇಳಲಿಲ್ಲ, ಹೇಳಿದ್ರೆ ನಾವೇ ಬಂದು ತಕೊಂಡೋಗ್ತಿದ್ವಿ, ಅದೂ ಅಲ್ಲದೆ, ತಾ.೧೮ರಂದು ಅಮ್ಮ ನನ್ನೊಂದಿಗೆ ೪೫ ನಿಮಿಷಗಳ ಕಾಲ ಮಾತಾಡಿದ್ದಾರೆ, ಹುಷಾರಿರುವದಾಗಿ ಹೇಳಿದ್ದಾರೆ. ದಿಢೀರಾಗಿ ೨೦ರಂದು ಅವರು ಸಾವನ್ನಪ್ಪಿರುವದಾಗಿ ಸುದ್ದಿ ಬಂದಿದೆ. ಅವರು ಹೋದರೂ ಕನಿಷ್ಟ ಅವರ ನೆನಪಿಗಾಗಿಯಾದರೂ ಅವರ ಬಳಿಯಿದ್ದ ತಾಳಿಯ ನ್ನಾದರೂ ಕೊಟ್ಟರೆ ಸಾಕು..,’ ಎಂದು ಪುತ್ರ ಮಿಥುನ್ ಕಣ್ಣೀರು ಹಾಕುತ್ತಾರೆ.

ಬದುಕಿದವರ ಹಿಂಡದಿರಿ..!

ಕೋವಿಡ್ ಆಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ಬಹಳಷ್ಟು ಮರುಕಳಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಮೃತಪಟ್ಟವರಿಗೆ ಸೇರಿದ ಮೊಬೈಲ್, ಹಣ, ಚಿನ್ನಾಭರಣ, ಇನ್ನಿತರ ಬೆಲೆಬಾಳುವ ವಸ್ತುಗಳು ಕಾಣೆಯಾಗುತ್ತಿರುವ ಬಗ್ಗೆ ಕೇಳಿಬರುತ್ತಿವೆ. ಸದ್ಯಕ್ಕೆ ಈ ಎರಡು ಪ್ರಕರಣಗಳು ಹೊರಬಂದಿದ್ದು, ನೊಂದ ಈ ಕುಟುಂಬದ ಸದಸ್ಯರುಗಳು ತಮ್ಮವರಿಗೆ ಸೇರಿದ ವಸ್ತುಗಳನ್ನು ಕೇಳಲು ಹೋದ ಸಂದರ್ಭಗಳಲ್ಲಿ ಹಲವಷ್ಟು ಮಂದಿ ಹಣ, ಇನ್ನಿತರ ವಸ್ತುಗಳನ್ನು ಕಳೆದುಕೊಂಡವರು ಅಂಗಲಾಚುತ್ತಿದ್ದ ಬಗ್ಗೆಯೂ ಹೇಳುತ್ತಾರೆ. ಮೊಬೈಲ್ ಸಾಮಾನ್ಯವಾಗಿ ಎಲ್ಲರು ಕಳೆದುಕೊಳ್ಳುತ್ತಾರೆ, ಅಥವಾ ಹಾಳಾಗುವದೂ ಇದೆ. ಅದೇನೂ ದೊಡ್ಡ ವಿಚಾರವಲ್ಲ. ಆದರೆ, ಇಂತಹ ಸಂದರ್ಭಗಳಲ್ಲಿ ಕಳೆದು ಕೊಳ್ಳುವದಿದೆಯಲ್ಲ ಅದರ ನೋವು ಸಹಿಸಲಾಗದು. ಅಂತೆಯೇ ಆಭರಣಗಳೂ ಕೂಡ. ಸಾಮಾನ್ಯವಾಗಿ ಜಿಲ್ಲೆಯ ಜನತೆ ಸುಸಂಸ್ಕೃತರಾಗಿದ್ದು, ಪತಿ ಜೀವಂತವಿರುವಾಗಲೇ ಮಾಂಗಲ್ಯ ತೆಗೆದಿರಿಸುವದು ಕಡಿಮೆಯೇ. ಇಂತಹ ಸಂದರ್ಭದಲ್ಲಿ ಅವರಿಗೆ ಸೇರಿದ ವಸ್ತುಗಳು ಒಂದು ಜೀವ ಇರೋವರೆಗೂ ಜೀವಂತವಾಗಿದ್ದು, ಆ ಜೀವ ಹೋದ ಕೂಡಲೇ ಅವುಗಳು ಕೂಡ ಕಾಣೆಯಾಗುವದು ದುರಂತವಲ್ಲದೆ ಮತ್ತಿನ್ನೇನು..? ಇನ್ನಾದರೂ ಮಾನವೀಯ ದೃಷ್ಟಿಯಿಂದಲಾದರೂ ಮೊದಲೇ ಕುಟುಂಬದ ಒಂದು ಜೀವವನ್ನು ಕಳೆದುಕೊಂಡು ಬದುಕುಳಿದ ನೊಂದವರ ಜೀವವನ್ನು ಹಿಂಡದಿರಿ ಎಂಬದು ನೊಂದವರ ಕಳಕಳಿಯ ಮನವಿಯಾಗಿದೆ. ಆಸ್ಪತ್ರೆಯ ಆಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿದಲ್ಲಿ ಒಂದಷ್ಟು ನೊಂದ ಕುಟುಂಬಗಳ ಕಣ್ಣೀರು ಒರೆಸಿದಂತಾಗುತ್ತದೆ.

-ಕುಡೆಕಲ್ ಸಂತೋಷ್