ಗೋಣಿಕೊಪ್ಪಲು.ಮೇ.೨೩:ಕೋವಿಡ್ ಸಮಯದಲ್ಲಿ ಜನರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದರೆ,ಇತ್ತ ಕೆಲವರು ಇದಾವುದನ್ನು ಮನಗಾಣದೆ ಕಳ್ಳತನ ಮಾಡಿ ಜೀವನ ಸಾಗಿಸುವತ್ತ ತಮ್ಮ ಚಾಳಿ ಮುಂದುವರಿಸುತ್ತಿದ್ದಾರೆ.

ಶುAಠಿ ತುಂಬಿಸಿದ್ದ ಲಾರಿಯಿಂದ ಐದು ಚೀಲ ಶುಂಠಿಯನ್ನು ಕಳವು ಮಾಡಿ ನಂತರ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ,ಪೋಲಿಸರ ಸಹಕಾರದಿಂದ ಕಳ್ಳರಿಂದ ೫ ಚೀಲ ಶುಂಠಿಯನ್ನು ವಶಪಡಿಸಿಕೊಂಡ ಘಟನೆ ಹುದಿಕೇರಿ ಪಟ್ಟಣದಲ್ಲಿ ನಡೆದಿದೆ.

ಶನಿವಾರ ಸಂಜೆಯ ವೇಳೆ ಹುದಿಕೇರಿ ಗ್ರಾಮದ ಕಾಫಿ ಬೆಳೆಗಾರ ಚಂಗುಲAಡ ಆರ್. ತಿಮ್ಮಯ್ಯ (ತಿಮ್ಮು) ಎಂಬವರಿಗೆ ಸೇರಿದ ಶುಂಠಿಯನ್ನು ವ್ಯಾಪಾರಕ್ಕಾಗಿ ಅಣಿ ಮಾಡಿ ಲಾರಿಯಲ್ಲಿ ಅರ್ಧ ಭಾಗವನ್ನು ತುಂಬಿದ್ದರು. ಮಳೆ ಕಾಣಿಸಿಕೊಂಡ ಕಾರಣ ಉಳಿದ ಅರ್ಧ ಭಾಗವನ್ನು ಮುಂಜಾನೆ ತುಂಬಿಸಿಕೊಳ್ಳುವ ತೀರ್ಮಾನ ಮಾಡಿದ್ದರು.

ಮಳೆ ಬಂದ ಕಾರಣ ಲಾರಿಯು ಗದ್ದೆಗೆ ಇಳಿಯಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಟ್ರಾಕ್ಟರ್ ನಲ್ಲಿ ತುಂಬಿ ಲಾರಿಗೆ ಲೋಡ್ ಮಾಡಲು ವ್ಯವಸ್ಥೆ ಮಾಡಿದ್ದರು. ಹಾಗಾಗಿ ಅರ್ಧ ತುಂಬಿದ ಲಾರಿಯನ್ನು ಹುದಿಕೇರಿ ಟೌನ್ ಬಳಿ ನಿಲ್ಲಿಸಿದ್ದರು. ಶುಂಠಿಯನ್ನು ಆಂದ್ರಪ್ರದೇಶಕ್ಕೆ ಸಾಗಿಸಲು ಅಲ್ಲಿಂದಲೇ ಲಾರಿ ಆಗಮಿಸಿತ್ತು. ಲಾರಿ ಚಾಲಕ ಟೌನ್‌ನಲ್ಲಿ ಲಾರಿ ನಿಲ್ಲಿಸಿ ಲಾರಿಯ ಒಳಗೆ ನಿದ್ರೆಗೆ ಜಾರಿದ್ದರು.

(ಮೊದಲ ಪುಟದಿಂದ) ತುಂತುರು ಮಳೆ ಸುರಿಯುತ್ತಿತ್ತು, ರಸ್ತೆಯಲ್ಲಿ ಅಪರೂಪಕ್ಕೆ ಒಂದೊAದು ವಾಹನ ಸಂಚಾರ ಮಾಡುತ್ತಿದ್ದವು.

ಭಾನುವಾರ ನಡುರಾತ್ರಿಯ ೨ ಗಂಟೆಯ ಸಮಯದಲ್ಲಿ ಲಾರಿಯಲ್ಲಿ ತುಂಬಿದ್ದ ಶುಂಠಿ ಚೀಲ ಕಳ್ಳತನ ಮಾಡಲು ಕಳ್ಳರು ಆಗಮಿಸಿದ್ದರು.ಲಾರಿಯು ಆಂದ್ರಪ್ರದೇಶಕ್ಕೆ ಸೇರಿದ್ದಾಗಿದೆ ಎಂದು ತಿಳಿದ ಕಳ್ಳರು ರಾಜರೋಷವಾಗಿ ಲಾರಿಯಲ್ಲಿದ್ದ ಶುಂಠಿ ಚೀಲವನ್ನು ಕಳ್ಳತನ ಮಾಡಿ ಸಮೀಪದ ಸಂತೆ ಮಾಳದ ಬಳಿಯಲ್ಲಿ ಒಂದೊAದೇ ಚೀಲವನ್ನು ತಲೆಯ ಮೇಲೆ ಇಟ್ಟುಕೊಂಡು ಸಾಗಿಸಿ ಬಚ್ಚಿಡುತ್ತಿದ್ದರು.

ಇದನ್ನೆಲ್ಲಾ ಲಾರಿಯ ಚಾಲಕ ಲಾರಿಯ ಒಳಗಿನಿಂದಲೇ ಸೂಕ್ಷö್ಮವಾಗಿ ಗಮನಿಸುತ್ತಿದ್ದ. ಲಾರಿಯಲ್ಲಿ ಚಾಲಕ ಇಲ್ಲ ಎಂದು ಭಾವಿಸಿದ ಕಳ್ಳರು, ಲಾರಿಯಲ್ಲಿ ಇದ್ದ ಐದು ಚೀಲ ಶುಂಠಿಯನ್ನು ಅಷ್ಟೊತ್ತಿಗಾಗಲೇ ಕಳ್ಳತನ ಮಾಡಿದ್ದರು. ಉಳಿದ ಚೀಲಗಳನ್ನು ಸಾಗಿಸಲು ಪ್ರಯತ್ನ ಮಾಡುತ್ತಲೆ ಇದ್ದರು.

ಲಾರಿ ಚಾಲಕ ಶಮೀರ್‌ನ ಕಣ್ಣ ಮುಂದೆಯೇ ತನ್ನ ಲಾರಿಯಿಂದ ಕಳ್ಳತನ ನಡೆಯುತ್ತಿದ್ದರೂ ಕಳ್ಳರ ಭಯದಿಂದ ಈತ ಲಾರಿಯಿಂದ ಇಳಿಯುವ ಪ್ರಯತ್ನ ಮಾಡಲಿಲ್ಲ. ಜಾಗರೂಕತೆಯಿಂದ ಬುದ್ದಿ ಉಪಯೋಗಿಸಿ ತಿತಿಮತಿಯಲ್ಲಿ ವಾಸವಿರುವ ತನ್ನ ಸ್ನೇಹಿತನಿಗೆ ಮೊಬೈಲ್ ಮೂಲಕ ಸುದ್ದಿ ತಿಳಿಸಿದ್ದಾನೆ.

ಕೂಡಲೇ ತಿತಿಮತಿ ಯುವಕ ಹುದಿಕೇರಿ ಔಟ್‌ಪೋಸ್ಟ್ ಹಾಗೂ ಶ್ರೀಮಂಗಲ ಪೊಲೀಸ್ ಠಾಣೆಗೆ ಸುದ್ದಿ ತಿಳಿಸುವ ಪ್ರಯತ್ನ ಮಾಡಿದರಾದರೂ ಮೊಬೈಲ್ ಸಂಪರ್ಕಕ್ಕೆ ಯಾರು ಸಿಗಲಿಲ್ಲ. ಅನ್ಯ ಮಾರ್ಗವಿಲ್ಲದೇ ಹುದಿಕೇರಿ ನಿವಾಸಿ ರೈತ ಸಂಘದ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಸೂರಜ್ ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಚಂದ್ರ ಪ್ರಕಾಶ್ ಹಾಗೂ ಗ್ರಾಮದ ಪ್ರಮುಖ ಕೋದೆಂಗಡ ವಾಸು ಅವರಿಗೆ ಸುದ್ದಿ ಮುಟ್ಟಿಸಿದರು.

ಆ ತಡ ರಾತ್ರಿಯಲ್ಲಿ ಕಳ್ಳತನ ಮಾಡುವ ಸ್ಥಳಕ್ಕೆ ಈ ಪ್ರಮುಖರು ಪೊಲೀಸರೊಂದಿಗೆ ಆಗಮಿಸಿ ಶುಂಠಿ ಕಳ್ಳತನ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಕಳ್ಳತನ ಮಾಡಿದ್ದ ಶುಂಠಿ ಚೀಲಗಳನ್ನು ಕಳ್ಳರಿಂದಲೇ ಮತ್ತೆ ಲಾರಿಗೆ ತುಂಬಿಸಿದ್ದಾರೆ.

ನಡುರಾತ್ರಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸ್ಥಳಕ್ಕೆ ಆಗಮಿಸಿದ ಗ್ರಾಮದವರು ಆರೋಪಿ ಸಹಿತ ಮಾಲನ್ನು ಪೊಲೀಸರ ಸಮ್ಮುಖದಲ್ಲಿ ವಶಪಡಿಸಿಕೊಂಡಿದ್ದಾರೆ. ಮಾನವೀಯತೆ ತೋರುವ ಮೂಲಕ ಆಂದ್ರಪ್ರದೇಶದ ಲಾರಿಯ ಚಾಲಕನಿಗೆ ಸಹಾಯ ಮಾಡಿದ್ದಾರೆ. ಪಟ್ಟಣದ ಕೆಲವು ಕಡೆಗಳಲ್ಲಿ ಪರ ಊರಿನಿಂದ ಬರುವ ಕೆಲವರು ಈ ರೀತಿಯ ಕಳ್ಳತನ ಮಾಡುತ್ತಿರುವುದು ಇದರಿಂದ ಬೆಳಕಿಗೆ ಬಂದಿದೆ.

ಅನಾಮಧೇಯ ವ್ಯಕ್ತಿಗಳು ಪಟ್ಟಣದಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮದ ಮುಖಂಡರು ಸ್ಥಳಿಯ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಇನ್ನೂ ಮುಂದೆ ಗ್ರಾಮದಲ್ಲಿ ಕಾಣಿಸಿಕೊಳ್ಳದಂತೆ ಕಳ್ಳರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮುಂಜಾನೆ ಲಾರಿಗೆ ಶುಂಠಿ ತುಂಬಿ ಆಂದ್ರಪ್ರದೇಶಕ್ಕೆ ಕಳುಹಿಸಿದ್ದಾರೆ.

ಊರಿನವರ ಸಕಾಲಿಕ ಕ್ರಮದಿಂದ ದೊಡ್ಡ ಅನಾಹುತವು ತಪ್ಪಿದಂತಾಗಿದೆ. ಗ್ರಾಮಸ್ಥರು ಈ ಮೂವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

- ಹೆಚ್.ಕೆ. ಜಗದೀಶ್