ಗೋಣಿಕೊಪ್ಪಲು, ಮೇ ೨೦: ಕೊರೊನಾ ಎರಡನೇ ಅಲೆಯಿಂದ ದೇಶದೆಲ್ಲೆಡೆ ಅನೇಕ ಸಾವುನೋವುಗಳು ಸಂಭವಿಸಿವೆ. ಸರ್ಕಾರ ಈ ನಿಟ್ಟಿನಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ಕೈಗೊಂಡರೂ ಕೂಡ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.ಇದರಿಂದಾಗಿ ಲಾಕ್‌ಡೌನ್ ಮುಂದುವರೆಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸೋಂಕಿನ ಸಂಖ್ಯೆ ಮಾತ್ರ ಕಡಿಮೆ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ.ಕೇವಲ ಪ್ರಮುಖ ಪಟ್ಟಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಪ್ರಕರಣಗಳು ಇದೀಗ ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡುಬರಲಾರAಭಿಸಿವೆ.

ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ವೀರಾಜಪೇಟೆ ತಾಲೂಕು ಆಡಳಿತ ಹೊಸ ಟಾಸ್ಕ್ ನೀಡುವ ಮೂಲಕ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಈ ಮೂಲಕ ಜಿಲ್ಲೆಗೆ ಮಾದರಿಯಾಗಿದೆ. ಕೊರೊನಾವನ್ನು ಆದಷ್ಟು ಬೇಗನೆ ಹತೋಟಿಗೆ ತರುವ ಮೊದಲ ಪಂಚಾಯಿತಿಗೆ ಆಡಳಿತ ನಗದು ಬಹುಮಾನದೊಂದಿಗೆ ಪ್ರಶಂಸಾ ಪತ್ರ ನೀಡುವ ಮೂಲಕ ಮುಂದೆ ಉಸ್ತುವಾರಿ ಮಂತ್ರಿಗಳು ಜಿಲ್ಲೆಗೆ ಆಗಮಿಸಿದ ವೇಳೆ ಅಂತಹ ಪಂಚಾಯಿತಿಯನ್ನು ಗೌರವಿಸಲಿದ್ದಾರೆ.ಕೆಲವು ತಿಂಗಳ ಹಿಂದೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಹಲವಾರು ಸದಸ್ಯರು ಆರಿಸಿ ಬಂದಿದ್ದಾರೆ.

ನೂತನ ಸದಸ್ಯರಿಗೆ ತಮ್ಮ ಗ್ರಾಮಕ್ಕೆ ಏನಾದರೂ ಹೊಸತನದ ಕೆಲಸ ಮಾಡಬೇಕೆಂಬ ಬಯಕೆ ಸಹಜವಾಗಿಯೇ ಇರುತ್ತದೆ.