ಮಡಿಕೇರಿ, ಮೇ ೧೮: ‘ಎಲ್ಲರೂ ಮಾಡುವದು ಹೊಟ್ಟೆಗಾಗಿ., ಗೇಣು ಬಟ್ಟೆಗಾಗಿ..’ ಎಂಬ ಮಾತಿದೆ.., ವಿಸ್ಮಯವಾದ ಈ ಸೃಷ್ಟಿಯಲ್ಲಿ ಯಾವದೇ ಜೀವಿ ಕೂಡ ಹಸಿವಿನಿಂದ ಬದುಕಲಾರದು, ಗಿಡ, ಮರ, ವiಣ್ಣಿಗೂ ಆಹಾರ ಎಂಬದು ಬೇಕೇ ಬೇಕು., ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಜ ಕೂಡ ಇದರಿಂದ ಹೊರತಾಗಿಲ್ಲ..! ಪ್ರಾಣಿಗಳಾದರೋ ಆಹಾರವಿಲ್ಲದೆ ಒಂದಷ್ಟು ದಿವಸ ಬದುಕಬಲ್ಲುದು. ಆದರೆ, ಮನುಷ್ಯ ಅನ್ನ-ನೀರಿಲ್ಲದೆ ಬದುಕಲಾರನೆಂಬದು ಕಟು ಸತ್ಯ. ಹಸಿವನ್ನು ನೀಗಿಸಿಕೊಳ್ಳುವದೇ ಕಷ್ಟ. ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ನೀಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಪುಣ್ಯದ ಕಾರ್ಯಕ್ಕೆ ಯುವಕರ ತಂಡವೊAದು ಕೈಜೋಡಿಸಿದೆ. ಲಾಕ್‌ಡೌನ್ ಕಾಲದಲ್ಲಿ ಆಸ್ಪತ್ರೆಗೆ ಕೋವಿಡ್ ಪರೀಕ್ಷೆಗೆಂದು ಬರುವವರ ಎರಡು ಹೊತ್ತಿನ ಹಸಿವು ನೀಗಿಸುವ ಕಾರ್ಯದಲ್ಲಿ ಮುಂದಾಗಿದೆ. ‘ನಮ್ಮವರಿಗಾಗಿ ನಾವು’ ಎಂಬ ಘೋಷವಾಕ್ಯದಡಿ ಯುವತಂಡ ಸೇರಿಕೊಂಡು ಬಿಸಿ ಬಿಸಿ, ರುಚಿಯಾದ ಅಡುಗೆ ಮಾಡಿ ಉಚಿತವಾಗಿ ನೀಡುತ್ತಾ ಹಸಿದಿರುವವರ ಹೊಟ್ಟೆ ತಣಿಸುತ್ತಿದೆ.

ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್‌ಡೌನ್ ಜಾರಿ ಮಾಡಿದ್ದು, ಜಿಲ್ಲೆಯಲ್ಲಿಯೂ ಇದು ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು ಸೇರಿದಂತೆ ಎಲ್ಲವೂ ಬಂದ್ ಆಗಿವೆ. ವಾರದಲ್ಲಿ ಮೂರು ದಿವಸ ಬೆಳಿಗ್ಗೆ ೬ರಿಂದ ೧೦ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆಯಾದರೂ ಹೊಟೇಲ್, ಉಪಾಹಾರ ಮಂದಿರಗಳು ತೆರೆದಿರುವದಿಲ್ಲ. ಇತರ ನಾಲ್ಕು ದಿನಗಳಲ್ಲಿ ಪಟ್ಟಣಗಳಲ್ಲಿ ಕುಡಿಯಲು ನೀರು ಕೂಡ ಸಿಗುವದಿಲ್ಲ. ಇಂತಹ ಪರಿಸ್ಥಿತಿಯ ನಡುವೆ ಪ್ರತಿನಿತ್ಯ ನೂರಾರು ಮಂದಿ ಕೋವಿಡ್ ಪರೀಕ್ಷೆಗೆಂದು ಹಾಗೂ ಸೋಂಕು ದೃಢಪಟ್ಟವರು ಚಿಕಿತ್ಸೆಗೆಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಬರುತ್ತಾರೆ. ಪರೀಕ್ಷೆಗೆ ಬರುವವರ ಸಂಖ್ಯೆ ಹೆಚ್ಚಿರುವದರಿಂದ ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ತಡವಾಗುತ್ತದೆ. ಈ ವೇಳೆ ಸೋಂಕಿತರಿಗೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗುವವರಿಗೆ ಮಧ್ಯಾಹ್ನದ ಊಟೋಪಚಾರದ ವ್ಯವಸ್ಥೆಯಿರುತ್ತದೆ. ಆದರೆ, ಪರೀಕ್ಷೆಗೆ ಬಂದವರಿಗೆ, ಅವರ ಜೊತೆಯಲ್ಲಿ ಬರುವವರಿಗೆ ಯಾವದೇ ಊಟದ ವ್ಯವಸ್ಥೆ ಇರುವದಿಲ್ಲ. ಈ ಸಮಸ್ಯೆಯನ್ನು ಮನಗಂಡ ವಕೀಲ ಅಚ್ಚಾಂಡಿರ ಪವನ್ ಪೆಮ್ಮಯ್ಯ ನೇತೃತ್ವದ ಕೊಡಗು ರಕ್ಷಣಾ ವೇದಿಕೆಯ ಯುವಕರ ತಂಡ ಹಸಿದವರಿಗೊಂದಿಷ್ಟು ನೆರವು ನೀಡುವ ನಿಟ್ಟಿನಲ್ಲಿ ಮುಂದಾಗಿ ಇದೀಗ ಪ್ರತಿನಿತ್ಯ ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸುತ್ತಿದೆ.

ಹರಿದು ಬಂದ ನೆರವು

ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಕೋವಿಡ್ ಸೋಂಕು ತಗಲಿದ್ದ ಪತ್ನಿ ಹಾಗೂ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಂದರ್ಭ ಪರೀಕ್ಷಾ ವರದಿ ಬರಲು ತಡವಾಗಿÀ ಮಗ ಊಟ ಕೇಳಿದಾಗ ಎಲ್ಲಿಯೂ ಊಟ ಸಿಗದೆ ಪರಿತಪಿಸುವಂತಾಗಿತ್ತು. ಈ ಬಗ್ಗೆ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣ ಬಳಗದಲ್ಲಿ ನೋವನ್ನು ಹಂಚಿಕೊAಡ ಅವರು, ಹಸಿದವರಿಗೆ ಒಂದು ಹೊತ್ತು ಊಟ ನೀಡಿ ಸಹಕರಿಸುವ ಬಗ್ಗೆ ಸಲಹೆ ಕೇಳಿದ್ದರು. ಇದಕ್ಕೆ ಬಳಗದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ವಿಚಾರವು ದೇಶ, ವಿದೇಶಕ್ಕೂ ಹರಡಿ ಸಹೃದಯ ದಾನಿಗಳಿಂದ ನೆರವು ಲಭಿಸಿತು. ಎಲ್ಲರ ಸಲಹೆ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಂದ ಅನುಮತಿ ಪಡೆದುಕೊಂಡು ‘ಅನ್ನದಾನ’ ಕಾರ್ಯಕ್ಕೆ ಮುಂದಾದ ತಂಡ ತಾವೇ ಅಡುಗೆ ತಯಾರಿಸಿ, ಪ್ಯಾಕ್ ಮಾಡಿ ತಂದು ಆಸ್ಪತ್ರೆ ಎದುರು ಹಸಿದವರಿಗೆ ನೀಡುತ್ತಿದೆ.

ರುಚಿಯಾದ ಊಟ

ಕಳೆದ ಹತ್ತು ದಿನಗಳಿಂದ ಈ ಉಚಿತ ಸೇವೆ ನಡೆಯುತ್ತಿದ್ದು, ಪ್ರತಿನಿತ್ಯ ೨೫೦ರಿಂದ ೩೦೦ ಮಂದಿಗೆ ಊಟ ನೀಡಲಾಗುತ್ತಿದೆ. ಇದರೊಂದಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಕೂಡಾ ಇದ್ದು, ಕಳೆದ ಹತ್ತು ದಿನಗಳಲ್ಲಿ ಐದು ದಿನಗಳ ಕಾಲ ಆರ್ಟ್ಆಫ್ ಲಿವಿಂಗ್‌ನ ಮಡಿಕೇರಿ ಶಾಖೆಯ ಸಂಯೋಜಕಿ ಕೊಂಗೇಟಿರ ಕೃಷ್ಣಾ ಬೋಪಯ್ಯ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗಿನ ಉಪಾಹಾರಕ್ಕೆ ವಿಧ ವಿಧವಾದ ರುಚಿಕರ ತಿಂಡಿಗಳಿದ್ದರೆ, ಮಧ್ಯಾಹ್ನಕ್ಕೆ ವಿಟಮಿನ್‌ಯುಕ್ತ ಸೊಯಾ ಚಂಕ್ ಪಲಾವ್, ಲೆಮನ್ ರೈಸ್, ಕುಷ್ಕಾದೊಂದಿಗೆ ಮೊಟ್ಟೆ ನೀಡಲಾಗುತ್ತಿದೆ. ಬೆಳಿಗ್ಗೆ ೮ರಿಂದ ೯ರವರೆಗೆ ಉಪಾಹಾರ ಹಾಗೂ ಮಧ್ಯಾಹ್ನ ೧೨.೩೦ರಿಂದ ಊಟದ ವ್ಯವಸ್ಥೆ ಇರುತ್ತದೆ. ಊಟದೊಂದಿಗೆ ಕುಡಿಯಲು ನೀರು ಕೂಡ ನೀಡಲಾಗುತ್ತದೆ. ಅಡುಗೆಗೆ ಹೆಚ್ಚಾಗಿ ತಾಜಾ ನಾಡು ತರಕಾರಿಯನ್ನೆ ಬಳಸಲಾಗುತ್ತಿದ್ದು, ಆಹಾರ ಪದಾರ್ಥಗಳು, ತರಕಾರಿಗಳನ್ನೂ ಕೂಡ ದಾನಿಗಳು ನೀಡುತ್ತಿದ್ದಾರೆ. ರಕ್ಷಣಾ ವೇದಿಕೆಯ ಬಳಗದವರೇ ಅಡುಗೆ ತಯಾರಿ, ಪ್ಯಾಕಿಂಗ್ ಹಾಗೂ ಊಟ ಬಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದು, ರವಿ ಪಾಪು, ವಿದ್ಯಾರ್ಥಿ ಘಟಕದ ನವೀನ್, ದಿವ್ಯಾ, ಅಡುಗೆಗೆ ರಾಜು ಹಾಗೂ ತಂಡ ಮತ್ತು ಅಚ್ಚಾಂಡಿರ, ಕುಟ್ಟಂಡ ಕುಟುಂಬದವರು ಕೈಜೋಡಿಸಿದ್ದಾರೆ.

ಮನೆಗಳಿಗೂ ಊಟ

ಕೇವಲ ಆಸ್ಪತ್ರೆ ಬಳಿ ಇರುವವರಿಗೆ ಮಾತ್ರವಲ್ಲದೆ, ಸೋಂಕು ತಗಲಿ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಗೃಹ ಸಂಪರ್ಕತಡೆಯಲ್ಲಿರುವವರಿಗೂ ಊಟದ ಪ್ಯಾಕ್ ಒದಗಿಸಲಾಗುತ್ತಿದೆ. ಅವಶ್ಯ ಇರುವವರು ಮುಂಚಿತವಾಗಿ ಕರೆ ಮಾಡಿ ತಿಳಿಸಿದರೆ ಅವರುಗಳ ಮನೆಗೆ ಊಟದ ಪ್ಯಾಕ್‌ಗಳನ್ನು ಪವನ್ ಹಾಗೂ ಬಳಗದವರು ತಲಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಮನೆಗಳಿಂದ ಕರೆಗಳು ಬರುತ್ತಿದ್ದು, ತಲಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಮಹಾನಗರ., ದೊಡ್ಡ ಪಟ್ಟಣಗಳಲ್ಲಿ ಸೆಲೆಬ್ರಿಟಿಗಳು, ಉದ್ಯಮಿಗಳು, ಸಾಕಷ್ಟು ಉಳ್ಳವರು ಬೇರೆ ಬೇರೆ ರೀತಿಯಲ್ಲಿ ಸಂಕಷ್ಟದಲ್ಲಿ ರುವವರಿಗೆ ನೆರವಾಗುತ್ತಿದ್ದಾರೆ. ಆದರೆ, ಈ ಪುಟ್ಟ ಜಿಲ್ಲೆಯಲ್ಲೂ ಕೂಡ ಸಂಕಷ್ಟಕ್ಕೆ ಮರುಗುವ ಜೀವಗಳಿವೆ ಎಂಬದಕ್ಕೆ ಈ ಕಾರ್ಯವೊಂದು ನಿದರ್ಶನ. ಕಷ್ಟ ಕಾಲದಲ್ಲಿನ ರಕ್ಷಣಾ ವೇದಿಕೆಯ ಈ ಉಚಿತ ಸೇವೆಗೆ ಎಲ್ಲೆಡೆ ಯಿಂದ ಪ್ರಶಂಸೆ ವ್ಯಕ್ತಗೊಳ್ಳುತ್ತಿದ್ದು, ಲಾಕ್‌ಡೌನ್ ಮುಗಿಯುವವರೆಗೂ ಈ ಸೇವೆ ಮುಂದುವರಿಯಲಿದೆ. ರಕ್ಷಣಾ ವೇದಿಕೆಯ ಈ ಸೇವೆಗೆ ಸಹಕಾರ ನೀಡಬಯಸುವವರು ಪವನ್ ಅವರನ್ನು (೯೪೮೧೪೩೧೭೧೬) ಸಂಪರ್ಕಿಸಬಹುದಾಗಿದೆ.

-ಸAತೋಷ್

‘ನಾನು ಸ್ವತಃ ಅನುಭವಿಸಿದ ಯಾತನೆಯಿಂದಾಗಿ ಈ ಒಂದು ಯೋಜನೆ ಹೊಳೆದಿದ್ದು, ರಕ್ಷಣಾ ವೇದಿಕೆ ಬಳಗದವರಿಂದ ಹಿಡಿದು ಹೊರ ರಾಜ್ಯ, ದೇಶಗಳಿಂದ ಸಹೃದಯರು ಸಹಾಯಹಸ್ತ ಚಾಚಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಬಳಿ ಕೇಳಿಕೊಂಡಾಗ ತುಂಬಾ ಖುಷಿಯಿಂದ ಅನುಮತಿ ನೀಡಿದರಲ್ಲದೆ, ಸಹಕಾರ ಕೂಡ ನೀಡುತ್ತಿದ್ದಾರೆ. ಈ ಸೇವೆಗೆ ಪ್ರತಿನಿತ್ಯ ರೂ. ೮ ರಿಂದ ೧೦ ಸಾವಿರ ವೆಚ್ಚವಾಗುತ್ತಿದ್ದು, ದಾನಿಗಳ ನೆರವಿನಿಂದ ಆಗುತ್ತಿದೆ. ಎಲ್ಲರಿಗೂ ವಿಟಮಿನ್‌ಯುಕ್ತ ಆಹಾರ ನೀಡಲಾಗುತ್ತಿದೆ. ಹೆಚ್ಚಾಗಿ ತಾಜಾ ನಾಡು ತರಕಾರಿ ಬಳಸಲಾಗುತ್ತಿದ್ದು, ಲಾಕ್‌ಡೌನ್ ಮುಗಿಯುವವರೆಗೂ ಸೇವೆ ಮುಂದುವರಿಸುತ್ತೇವೆ. ಇದೀಗ ಗೃಹ ಸಂಪರ್ಕ ತಡೆಯಲ್ಲಿರುವವರಿಂದಲೂ ಊಟಕ್ಕೆ ಕರೆಗಳು ಬರುತ್ತಿದ್ದು, ಅವರುಗಳಿಗೂ ತಲಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

-ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ