ಕುಶಾಲನಗರ, ಮೇ ೧೮: ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು- ಬಾಳುಗೋಡು ವ್ಯಾಪ್ತಿಯಲ್ಲಿ ಅಸಮರ್ಪಕ ಕಾಮಗಾರಿ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಕ್ಕೆ ಲೋಕೋಪಯೋಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂದಾಜು ಪಟ್ಟಿಯಂತೆ ಕಾಮಗಾರಿಯಲ್ಲಿ ಕೆಲವೆಡೆ ಲೋಪಗಳು ಕಂಡುಬAದಿದ್ದು, ಕಾಮಗಾರಿ ತಕ್ಷಣ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಗುಡ್ಡೆಹೊಸೂರು ಬಾಳುಗೋಡು ವ್ಯಾಪ್ತಿಯಲ್ಲಿ ೪.೮ ಕಿ.ಮೀ ಉದ್ದದ ರಸ್ತೆಯ ಅಭಿವೃದ್ಧಿ ಕಾಮಗಾರಿ ೧೨ ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು ಸಾಮಾಗ್ರಿಗಳ ಗುಣಮಟ್ಟ ಸಮರ್ಪಕವಾಗಿಲ್ಲ ಎಂದು ಸ್ಥಳೀಯ ಪ್ರಮುಖರು ದೂರಿದ ಹಿನೆÀ್ನಲೆಯಲ್ಲಿ ‘ಶಕ್ತಿ’ ಸಮಗ್ರ ವರದಿ ಮಾಡಿತ್ತು. ವರದಿ ಪ್ರಕಟಗೊಂಡ ಕೂಡಲೇ ಸ್ಪಂದಿಸಿದ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಕೆಲವೆಡೆ ನಡೆದಿರುವ ಕಾಮಗಾರಿ ಜೆಸಿಬಿ ಮೂಲಕ ಅಗೆದು ಪರಿಶೀಲನೆ ನಡೆಸಲಾಯಿತು. ತಾನು ಕಾಮಗಾರಿ ಸ್ಥಳಕ್ಕೆ ಕಳೆದ ೧೫ ದಿನಗಳಿಂದ ಭೇಟಿ ನೀಡಲು ಇಲಾಖಾ ವಾಹನದ ಸೌಲಭ್ಯ ಇರಲಿಲ್ಲ ಎಂದು ಸ್ಥಳೀಯರೊಂದಿಗೆ ಅಧಿಕಾರಿ ಮೋಹನ್ ಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದು ಕಂಡುಬAತು.

ಈ ಸಂದರ್ಭ ಜನಪ್ರತಿನಿಧಿಗಳಾದ ಆರ್.ಕೆ. ಚಂದ್ರ, ಮಾವಜಿ ರಕ್ಷಿತ್, ಪ್ರಮುಖರಾದ ನಂಗಾರು ಜಗ, ಬಾಲಕೃಷ್ಣ ನಾಯ್ಡು ಮತ್ತಿತರು ನಡೆದಿರುವ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ರಸ್ತೆಯ ಕೆಲವೆಡೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸದೇ ಅಂದಾಜು ಪಟ್ಟಿಯಂತೆ ಸಮರ್ಪಕವಾಗಿ ನಡೆಯದ ಕಾಮಗಾರಿ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸಲಾಗುವುದು ಮತ್ತು ಆ ಬಗ್ಗೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಇಂಜಿನಿಯರ್ ಮೋಹನ್ ಕುಮಾರ್ ‘ಶಕ್ತಿ’ಗೆ ಸ್ಪಷ್ಟನೆ ನೀಡಿದ್ದಾರೆ. ಸ್ಥಳದಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದ, ಪ್ರದೀಪ್, ಗುತ್ತಿಗೆದಾರರಾದ ದಿನೇಶ್ ಮತ್ತು ಸ್ಥಳಿಯರು ಇದ್ದರು.