ವಾಯುಭಾರ ಕುಸಿತದಿಂದಾಗಿ ಕಳೆದೆರಡು ದಿನಗಳಿಂದ ಸಿದ್ದಾಪುರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದು ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದಲ್ಲಿ ವಾಸಿಸುವ ೧೫೦ ಕ್ಕೂ ಅಧಿಕ ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಂದಾಯ ಇಲಾಖೆಯ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕಿ ಭಾನುಪ್ರಿಯ ನೇತೃತ್ವದಲ್ಲಿ ,ಗ್ರಾಮ ಲೆಕ್ಕಿಗ ಓಮಪ್ಪ ಬಣಕರ್ ಹಾಗೂ ಸಹಾಯಕ ಕೃಷ್ಣ ರವರು ಮನೆಮನೆಗಳಿಗೆ ತೆರಳಿ ನೋಟಿಸ್ ಜಾರಿಮಾಡಿದರು. ಇದಲ್ಲದೆ ಕೊಂಡAಗೇರಿ ಗ್ರಾಮದ ನದಿತೀರದಲ್ಲಿ ವಾಸಿಸುವ ೩೬ ಕ್ಕೂ ಅಧಿಕ ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಂದಾಯ ಇಲಾಖೆಯ ವತಿಯಿಂದ ನೋಟಿಸ್ ಜಾರಿ ಮಾಡಲಾಯಿತು.

ಕಳೆದ ಎರಡು ವರ್ಷಗಳಲ್ಲಿ ಪ್ರವಾಹಕ್ಕೆ ಸಿಲುಕಿ ಕರಡಿಗೋಡು, ಗುಹ್ಯ, ಕೊಂಡAಗೇರಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ನೆಲಸಮಗೊಂಡಿದ್ದವು. ಆದರೆ ಈವರೆಗೂ ನದಿ ತೀರದ ನಿವಾಸಿಗಳಿಗೆ ಸರಕಾರವು ಪುನರ್ವಸತಿ ಕಲ್ಪಿಸಿಕೊಟ್ಟಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಅದೇ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ವಾಸ ಮಾಡಿಕೊಂಡಿದ್ದಾರೆ.

ಇದೀಗ ಮತ್ತೆ ಮಳೆಗಾಲ ಪ್ರಾರಂಭವಾಗಿದ್ದು, ಕಂದಾಯ ಇಲಾಖೆ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟಿಸ್ ಜಾರಿ ಮಾಡಲಾಗುತ್ತಿದೆ. ಆದರೆ ಕೊರೊನಾ ವೈರಸ್‌ನಿಂದಾಗಿ ಭಯಗೊಂಡಿರುವ ನಿವಾಸಿಗಳು ಇದೀಗ ಎಲ್ಲಿಗೆ ಹೋಗಬೇಕೆಂಬ ಚಿಂತೆಯಲ್ಲಿದ್ದಾರೆ. ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕೂಡ ನದಿ ತೀರದ ನಿವಾಸಿಗಳಿಗೆ ಸೇರಿದಂತೆ ಬೆಟ್ಟ ಗುಡ್ಡಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್ ನೇತೃತ್ವದಲ್ಲಿ ಗ್ರಾಮ ಲೆಕ್ಕಿಗ ಸಚಿನ್ ಹಾಗೂ ಪಿ.ಡಿ.ಒ ಅನಿಲ್ ಕುಮಾರ್ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಂಡು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.